

ನವದೆಹಲಿ: ಹತ್ಯೆಯಾದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಬುರ್ಹಾನ್ ವಾನಿ ಸಹೋದರ ಖಾಲಿದ್ ವಾನಿ ಕುಟುಂಬಕ್ಕೆ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಪರಿಹಾರ ಘೋಷಣೆ ಮಾಡಿರುವುದಕ್ಕೆ ಕಾಂಗ್ರೆಸ್ ಬುಧವಾರ ಕಿಡಿಕಾರಿದೆ.
ಈ ಕುರಿತಂತೆ ಮಾತನಾಡಿರುವ ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಅವರು, ಗಡಿ ನಿಯಂತ್ರಣ ರೇಖೆ ಬಳಿ ನಿಂತು ದೇಶಕ್ಕಾಗಿ ಮಣಿದ ಯೋಧರಿಗೆ ಸರ್ಕಾರ ಪರಿಹಾರ ಘೋಷಣೆ ಮಾಡುತ್ತಿಲ್ಲ. ಇನ್ನು ಭಯೋತ್ಪಾದನ ಕುಟುಂಬಕ್ಕೆ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಪರಿಹಾರವನ್ನು ಘೋಷಣೆ ಮಾಡಿದೆ ಎಂದು ಪ್ರಶ್ನಿಸಿದ್ದಾರೆ.
ಬುರ್ಹಾನ್ ವಾನಿ ಹೆಸರನ್ನು ಬಳಸಿದವರನ್ನು ದೇಶ ದ್ರೋಹಿಗಳೆಂದು ಪ್ರಧಾನಿ ಮೋದಿ ಹಾಗೂ ಬಿಜೆಪಿ ಸದಸ್ಯರು ಹೇಳುತ್ತಾರೆ. ಬುರ್ಹಾನ್ ವಾನಿ ಸಹೋದರ ಖಾಲಿದ್ ವಾನಿ ಉಗ್ರನೆಂದು ಹೇಳುವುದೇ ಆದರೆ, ಆತನ ಕುಟುಂಬಕ್ಕೇಕೆ ಪರಿಹಾರ ಘೋಷಣೆ ಮಾಡಿದ್ದೀರಿ? ಎಂದು ಹೇಳಿದ್ದಾರೆ.
ನಿನ್ನೆಯಷ್ಟೇ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಬುರ್ಹಾನ್ ವಾನಿ ಸಹೋದರ ಒಳಗೊಂಡಂತೆ, ಕಣಿವೆಯಲ್ಲಿ ವಿವಿಧ ಭಯೋತ್ಪಾದನಾ ಚಟುವಟಿಕೆಗಳಿಗೆ ಸಂಬಂಧಿಸಿದ ಘಟನೆಗಳಲ್ಲಿ ಹತ್ಯೆಯಾದ 17 ಜನರ ಕುಟುಂಬಗಳಿಗೆ ಪರಿಹಾರ ಘೋಷಿಸಿತ್ತು.
ಜುಲೈ.8 ರಂದು ಬುರ್ಹಾನ್ ವಾನಿ ಹತ್ಯೆಯಾದಾಗಲಿಂದಲೂ ಕಾಶ್ಮೀರದಲ್ಲಿ ಗಲಭೆಗಳು ಉಂಟಾಗಿದ್ದವು ಮತ್ತು ಇದರಿಂದ ಕನಿಷ್ಠ 86 ಜನ ಮೃತಪಟ್ಟಿದ್ದರು.