ಮತ್ತೆ ವಿದೇಶಿಗರ ಮೇಲೆ ಹಲ್ಲೆ: ನೈಜೀರಿಯ ವಿದ್ಯಾರ್ಥಿಗಳಿಂದ ಆರೋಪ

ಬೆಂಗಳೂರಿನಲ್ಲಿ ನಡೆದ ವಿದೇಶಿ ವಿದ್ಯಾರ್ಥಿನಿ ಮೇಲಿನ ಥಳಿತ ಪ್ರಕರಣ ಮಾಸುವ ಮುನ್ನವೇ ಇದೀಗ ಹೈದರಾಬಾದ್ ನಲ್ಲೂ ನಡೆದಿದ್ದು, ಸ್ಥಳೀಯ ಗುಂಪೊಂದು ನಮ್ಮ ಮೇಲೆ ಹಲ್ಲೆ ಮಾಡಿದೆ ಎಂದು ನೈಜೀರಿಯಾ ವಿದ್ಯಾರ್ಥಿಗಳ ಗುಂಪೊಂದು ಶುಕ್ರವಾರ ಆರೋಪ ವ್ಯಕ್ತಪಡಿಸಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಹೈದರಾಬಾದ್: ಬೆಂಗಳೂರಿನಲ್ಲಿ ನಡೆದ ವಿದೇಶಿ ವಿದ್ಯಾರ್ಥಿನಿ ಮೇಲಿನ ಥಳಿತ ಪ್ರಕರಣ ಮಾಸುವ ಮುನ್ನವೇ ಇದೀಗ ಹೈದರಾಬಾದ್ ನಲ್ಲೂ ನಡೆದಿದ್ದು, ಸ್ಥಳೀಯ ಗುಂಪೊಂದು ನಮ್ಮ ಮೇಲೆ ಹಲ್ಲೆ ಮಾಡಿದೆ ಎಂದು ನೈಜೀರಿಯ ವಿದ್ಯಾರ್ಥಿಗಳ ಗುಂಪೊಂದು ಶುಕ್ರವಾರ ಆರೋಪ ವ್ಯಕ್ತಪಡಿಸಿದೆ.

ತಮ್ಮ ಮೇಲೆ ನಡೆದಿದೆ ಎಂದು ಆರೋಪ ವ್ಯಕ್ತಪಡಿಸಿರುವ ವಿದೇಶಿ ವಿದ್ಯಾರ್ಥಿಗಳು ಈ ಬಗ್ಗೆ ಹೈದರಾಬಾದ್ ಪೊಲೀಸರಲ್ಲಿ ದೂರು ದಾಖಲಿಸಿದ್ದು, ದೂರಿನಲ್ಲಿ ಪಾರಾಮೌಂಟ್ ಕಾಲೋನಿ ಬಳಿ ರಾತ್ರಿ 8.30ರ ಸುಮಾರಿಗೆ ಸ್ಥಳೀಯ ಗುಂಪೊಂದು ದೊಡ್ಡ ಶಸ್ತ್ರಾಸ್ತ್ರಗಳು ಹಾಗೂ ಪಿಸ್ತೂಲುಗಳನ್ನು ಹಿಡಿದು ನಮ್ಮ ಮೇಲೆ ಹಲ್ಲೆ ಮಾಡಲು ಯತ್ನ ನಡೆಸಿತು.

ಈ ವೇಳೆ ಭಯಭೀತರಾದ ನಾವು ರಾತ್ರಿ 9.30ರ ಸುಮಾರಿಗೆ ಠಾಣೆಗೆ ಬಂದು ದೂರು ದಾಖಲಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಘಟನೆ ನಂತರ ವಿದೇಶಿ ವಿದ್ಯಾರ್ಥಿಗಳು ಪೊಲೀಸರು ಭದ್ರತೆ ಕೊಡುವಂತೆ ಹಾಗೂ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆಂಬ ಭರವಸೆ ನೀಡುವವರೆಗೂ ವಿದ್ಯಾರ್ಥಿಗಳು ಠಾಣೆಯಿಂದ ಹೊರ ಹೋಗಿಲ್ಲ. ನಂತರ ಠಾಣೆಯ ಹಿರಿಯ ಅಧಿಕಾರಿ ಬಂದು ಭರವಸೆ ನೀಡಿದ ನಂತರ ವಿದ್ಯಾರ್ಥಿಗಳು ರಾತ್ರಿ 2.30ರ ಸುಮಾರಿಗೆ ಹೋಗಿದ್ದಾರೆ.

ಘಟನೆ ಕುರಿತಂತೆ ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿ ಪಿ.ಮುರಳಿ ಕೃಷ್ಣ ಅವರು, ಇದೊಂದು ಆಕಸ್ಮಿಕ ಘಟನೆಯಾಗಿದ್ದು, ಪ್ರಕರಣವನ್ನು ಈಗಾಗಲೇ ಸೆಕ್ಷನ್ 323 ಹಾಗೂ 341ರ ಅಡಿಯಲ್ಲಿ ದಾಖಲಿಸಿಕೊಳ್ಳಲಾಗಿದೆ. ತನಿಖೆ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ.

ಈ ಕುರಿತಂತೆ ಮಾಡನಾಡಿರುವ ಒಸ್ಮಾನಿಯಾ ವಿಶ್ವವಿದ್ಯಾಲಯ ವಿದ್ಯಾರ್ಥಿ ಹಾಗೂ ಹೈದರಾಬಾದ್ ನೈಜೀರಿಯ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಒಮೊಬೌಲ್ ಸಿವುನ್ ಗಿಡಿಯಾನ್ ಅವರು, ನಮ್ಮ ವಿದ್ಯಾರ್ಥಿಯೊಬ್ಬ ಬೈಕ್ ನಲ್ಲಿ ಚಲಿಸುತ್ತಿದ್ದ. ರಸ್ತೆ ದಾಟುವ ವೇಳೆ ಮತ್ತೊಂದು ದಿಕ್ಕಿನಿಂದ ಬಂದಿದ್ದ ವಾಹನಗಾರನಿಗೆ ದಾರಿಯನ್ನು ಬಿಡಲಾಗಿತ್ತು. ಈ ವೇಳೆ ಸ್ಥಳೀಯನೊಬ್ಬ ಅಶ್ಲೀಲ ಪದಗಳನ್ನು ಬಳಸಿ ನಿಂದಿಸಿದ. ಹೀಗಾಗಿ ಕೋಪಗೊಂಡ ನಮ್ಮ ವಿದ್ಯಾರ್ಥಿಯೂ ಕೂಡ ಆತನನ್ನು ನಿಂದಿಸಿದ. ಇದರಿಂದಾಗಿ ಇಬ್ಬರ ನಡುವೆಯೂ ಮಾತಿನ ಚಕಮಕಿ ನಡೆದಿತ್ತು ಎಂದು ಹೇಳಿದ್ದಾರೆ

ಈ ವೇಳೆ ನಮ್ಮ ವಿದ್ಯಾರ್ಥಿಯೊಂದಿಗೆ ಮತ್ತಿಬ್ಬರು ವಿದ್ಯಾರ್ಥಿಗಳು ಕೈ ಜೋಡಿಸಿದರು. ನಂತರ ಸ್ಥಳದಲ್ಲಿದ್ದವೆರೆಲ್ಲ ನಿಂದಿಸಿದ ವ್ಯಕ್ತಿಯ ಕಡೆಗೆ ವಾದಿಸಲು ಆರಂಭಿಸಿದರು. ನಂತರ ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ನಮ್ಮ ಮೇಲೆ ಹಲ್ಲೆ ನಡೆಸಲು ಯತ್ನ ನಡೆಸಿದರು. ಒಂದು ಸಾರ್ವಜನಿಕ ಪ್ರದೇಶದಲ್ಲಿ ಒಬ್ಬ ವ್ಯಕ್ತ ಮೇಲೆ ಶಸ್ತ್ರಾಸ್ತ್ರಗಳನ್ನಿಡಿದು ಹಲ್ಲೆ ನಡೆಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.

ಘಟನೆ ಕುರಿತಂತೆ ಈಗಾಗಲೇ ನಾವು ಅಧಿಕಾರಿಗಳಿಗೆ ವಿಡಿಯೋವೊಂದನ್ನು ನೀಡಿದ್ದು, ಪೊಲೀಸರು ಸ್ಥಳದಲ್ಲಿರುವ ಸಿಸಿಟಿವಿಗಳನ್ನು ಪರೀಶೀಲಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com