

ನವದೆಹಲಿ: ಸುಪ್ರೀಂ ಕೋರ್ಟ್, ಹೈಕೋರ್ಟ್ ನ್ಯಾಯಾಧೀಶರ ವಿರುದ್ಧ ಕೇಳಿಬರುವ ಅನುಚಿತ ವರ್ತನೆ ಹಾಗೂ ಅಸಾಮರ್ಥ್ಯ ಆರೋಪಗಳ ಬಗ್ಗೆ ತನಿಖೆ ನಡೆಸಲು ಈಗಿರುವ ವ್ಯವಸ್ಥೆಯನ್ನು ಬದಲಾವಣೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಯುಪಿಎ ಸರ್ಕಾರದ ಅವಧಿಯಲ್ಲಿ ಲೋಕಸಭೆಯಲ್ಲಿ ಅಂಗೀಕೃತಗೊಂಡಿದ್ದ ನ್ಯಾಯಾಂಗ ಮಾನದಂಡ ಹಾಗೂ ಉತ್ತರದಾಯಿತ್ವ ಮಸೂದೆ ಲೋಕಸಭೆ ವಿಸರ್ಜನೆಯಾದ ಹಿನ್ನೆಲೆಯಲ್ಲಿ ರದ್ದುಗೊಂಡಿತ್ತು. ಈಗ ಇದೇ ಮಸೂದೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ನ್ಯಾಯಾಧೀಶರ ಮೇಲಿನ ಆರೋಪ ತನಿಖೆಗೆ ಹೊಸ ವ್ಯವಸ್ಥೆ ಜಾರಿಗೆ ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ನ್ಯಾಯಾಂಗ ಮಾನದಂಡ ಹಾಗೂ ಉತ್ತರದಾಯಿತ್ವ ತಿದ್ದುಪಡಿ ಮಸೂದೆ ಮೂಲಕ ನ್ಯಾಯಾಧೀಶರಲ್ಲಿ ಸ್ವಾಯತ್ತತೆ, ನಿಷ್ಪಕ್ಷಪಾತ ಮತ್ತು ಹೊಣೆಗಾರಿಕೆಯನ್ನು ಮೂಡಿಸುವುದನ್ನು ಪರಿಗಣಿಸಬೇಕು ಎಂದು ಕಾನೂನು ಸಚಿವಾಲಯ ಹೇಳಿದೆ. 2015 ರ ಡಿಸೆಂಬರ್ ನಲ್ಲಿ ಸಂಸತ್ ನಲ್ಲಿ ಹೇಳಿಕೆ ನೀಡಿದ್ದ ಕಾನೂನು ಸಚಿವ ಸದಾನಂದ ಗೌಡ, ನ್ಯಾಯಾಂಗ ಮಾನದಂಡ ಹಾಗೂ ಉತ್ತರದಾಯಿತ್ವ ಮಸೂದೆ ರದ್ದುಗೊಂಡಿದೆ, ಹೊಸ ಮಸೂದೆ ಜಾರಿಗೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ, ತಿದ್ದುಪಡಿ ಅಂಶಗಳ ಬಗ್ಗೆ ಸಂಬಂಧಪಟ್ಟವರಿಂದ ಸಲಹೆ ಸೂಚನೆಗಳನ್ನು ಪರಿಗಣಿಸಲಾಗುವುದು ಎಂದಿದ್ದರು.
ಮಾರ್ಚ್ 2012 ರಲ್ಲಿ ಲೋಕಸಭೆಯಲ್ಲಿ ಅಂಗೀಕಾರಗೊಂಡಿದ್ದ ನ್ಯಾಯಾಂಗ ಮತ್ತು ಉತ್ತರದಾಯಿತ್ವ ಮಸೂದೆ 15 ನೇ ಲೋಕಸಭೆ ವಿಸರ್ಜನೆಯಾಗುವುದರೊಳಗೆ ರಾಜ್ಯಸಭೆಯಲ್ಲಿ ಅಂಗೀಕಾರವಾಗಬೇಕಿತ್ತಾದರೂ, ಮಸೂದೆಯಲ್ಲಿನ ಕೆಲವು ಅಂಶಗಳಿಗೆ ವಿರೋಧ ವ್ಯಕ್ತವಾಗಿ ಪ್ರತಿಭಟನೆ ಕೂಡ ನಡೆದಿತ್ತು. ಈಗ ರದ್ದುಗೊಂದಿರುವ ಮಸೂದೆಗೆ ಕೆಲವು ತಿದ್ದುಪಡಿ ತಂದು ನ್ಯಾಯಾಧೀಶರ ಮೇಲಿನ ಆರೋಪ ತನಿಖೆಗೆ ಹೊಸ ವ್ಯವಸ್ಥೆಯ ಅಂಶವನ್ನು ಸೇರಿಸುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸಿದ್ಧತೆ ನಡೆಸಿದೆ.