

ನವದೆಹಲಿ: ಭಾರತೀಯ ತೈಲ ನಿಗಮದ ಹೊಸ ದೇಶಿ ನಿರ್ಮಿತ ತೈಲ ಶುದ್ಧೀಕರಣ ಕೇಂದ್ರವನ್ನು ಒಡಿಶಾದ ಪಾರಾದೀಪ್ ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾನುವಾರ ದೇಶಕ್ಕೆ ಸಮರ್ಪಿಸಲಿದ್ದಾರೆ.
ಪಾರಾದೀಪ್ ಶುದ್ಧೀಕರಣ ಘಟಕ ಇಂದು ಉದ್ಘಾಟನೆಗೊಳ್ಳುತ್ತಿದೆ. ದೇಶಿ ತಂತ್ರಜ್ಞಾನದಿಂದ ನಿರ್ಮಿಸಲಾದ ಶುದ್ಧೀಕರಣ ಕೇಂದ್ರದಲ್ಲಿ ಹೆಚ್ಚಿನ ಎಲ್ ಪಿಜಿ ಅನಿಲವನ್ನು ಉತ್ಪಾದಿಸಲು ಸಾಧ್ಯವಿದೆ. ಹೈಡ್ರೋಕಾರ್ಬನ್ ವಲಯದಲ್ಲಿ ಪಾರಾದೀಪ್ ತೈಲ ಕೇಂದ್ರ ಕೈಗಾರಿಕೀಕರಣದಲ್ಲಿ ಹೊಸ ಅಲೆಯನ್ನು ಸೃಷ್ಟಿಸಲಿದೆ ಮತ್ತು ಈಶಾನ್ಯ ಭಾರತದ ಆರ್ಥಿಕ ಪ್ರಗತಿಯನ್ನು ಹೆಚ್ಚಿಸಲಿದೆ ಎಂದು ಪ್ರಧಾನ ಮಂತ್ರಿ ಸರಣಿ ಟ್ವೀಟ್ ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
34 ಸಾವಿರದ 555 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರು ವ ಪಾರಾದೀಪ್ ತೈಲ ಶುದ್ಧೀಕರಣ ಘಟಕವು ವಿಶ್ವದಲ್ಲಿಯೇ ಅತ್ಯಂತ ಸುಧಾರಿತ ಹಾಗೂ ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿದೆ.
ಪ್ರಧಾನಿಯವರು ಈ ಕಾರ್ಯಕ್ರಮದ ಬಳಿಕ ಭುವನೇಶ್ವರದ ಹೊರವಲಯದಲ್ಲಿರುವ ರಾಷ್ಟ್ರೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಹೊಸ ಕ್ಯಾಂಪಸ್ ನ್ನು ಉದ್ಘಾಟಿಸಲಿದ್ದಾರೆ. ನಂತರ ಪುರಿಯ ಜಗನ್ನಾಥ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.