

ನವದೆಹಲಿ: ಗುಜರಾತ್ ನಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಹತಳಾದ ಇಶ್ರತ್ ಜಹಾನ್ ಕುರಿತಂತೆ ನಾಯಕರು ನೀಡಿದ್ದ ಬೆಂಬಲ ಹಾಗೂ ಹೇಳಿಕೆಗಳನ್ನು ಕೂಡಲೇ ಹಿಂಪಡೆಯಬೇಕೆಂದು ಬಿಜೆಪಿ ಗುರುವಾರ ಹೇಳಿದೆ.
26/11 ಮುಂಬೈ ದಾಳಿಯ ಪ್ರಮುಖ ರುವಾರಿ ಡೇವಿಡ್ ಹೆಡ್ಲಿ ಇಂದು ನಡೆದ ವಿಚಾರಣೆ ವೇಳೆ ಇಶ್ರತ್ ಜಹಾನ್ ಕುರಿತಂತೆ ಸ್ಫೋಟಕ ಮಾಹಿತಿಯೊಂದನ್ನು ಹೊರಹಾಕಿದ್ದನು. ಗುಜರಾತ್ ನಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಹತಳಾದ ಇಶ್ರತ್ ಜಹಾನ್ ಲಷ್ಕರ್-ಇ-ತೊಯ್ಬಾ ಸಂಘಟನೆಯ ಕಾರ್ಯಕರ್ತಳಾಗಿದ್ದಳು. ಅಲ್ಲದೆ, ಆಕೆ ಮಹಿಳಾ ಆತ್ಮಹತ್ಯಾ ಬಾಂಬರ್ ಆಗಿದ್ದಳು ಎಂದು ಹೇಳಿದ್ದ.
ಹೆಡ್ಲಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ಶಾನವಾಜ್ ಹುಸೇನ್ ಅವರು, ಇಶ್ರತ್ ಜಹಾನ್ ಹೆಸರಿಡಿದು ರಾಜಕೀಯ ಮಾಡುತ್ತಿರುವವರು, ಆಕೆಯನ್ನು ಹುತಾತ್ಮಳೆಂದು ಕರೆದವರ ಬಣ್ಣ ಇಂದು ಬಯಲಾಗಿದೆ. ಇಶ್ರತ್ ಎನ್ ಕೌಂಟರ್ ಆದನಂತರ ಆಕೆಯನ್ನು ಮುಗ್ಧೆ. ಆಕೆ ಬಿಹಾರದ ಮಗಳು ಎಂದು ಹೇಳಿದ ನಾಯಕರು ಇಂದು ತಮ್ಮ ಬೆಂಬಲ ಹಾಗೂ ಹೇಳಿಕೆಗಳನ್ನು ಹಿಂಪಡೆಯಬೇಕು ಎಂದು ನಿತೀಶ್ ಕುಮಾರ್ ಅವರಿಗೆ ತಿರುಗೇಟು ನೀಡಿದ್ದಾರೆ.
ಹೆಡ್ಲಿ ಇಂದು ಹೇಳಿದ್ದನ್ನೇ ಭಾರತ ಹಲವು ವರ್ಷಗಳ ಹಿಂದೆಯೇ ಹೇಳಿತ್ತು. ಇದೀಗ ಅದರ ಸತ್ಯ ಬಹಿರಂಗಗೊಂಡಿದೆ. 26/11ರ ಮುಂಬೈ ಮೇಲಿನ ದಾಳಿಯಲ್ಲಿ ಪಾಕಿಸ್ತಾನ ಭಾಗಿಯಾಗಿರುವುದು ಈಗ ಖಚಿತವಾಗಿದೆ. ಪಾಕಿಸ್ತಾನ ಈ ಬಗ್ಗೆ ಉತ್ತರ ನೀಡಬೇಕಿದೆ. ಪಠಾಣ್ ಕೋಟ್ ದಾಳಿಯನ್ನು ಪಾಕಿಸ್ತಾನವೇ ಮಾಡಿದೆ. ಆದರೆ, ಈವರೆಗೂ ಯಾವುದೇ ಕ್ರಮಕೈಗೊಳ್ಳಲಾಗಿಲ್ಲ. ಉಗ್ರರ ದಾಳಿ ಹಿಂದೆ ಇರುವವರ ವಿರುದ್ಧ ಪಾಕಿಸ್ತಾನ ಕಠಿಣ ಕ್ರಮಕೈಗೊಳ್ಳಲಿದೆ ಎಂದು ಭಾರತ ನಂಬಿಕೆ ಇಟ್ಟಿದೆ ಎಂದು ಹೇಳಿದ್ದಾರೆ.