

ನವದೆಹಲಿ: ದೇಶವಿರೋಧಿ ಘೋಷಣೆ ಕೂಗಿದ್ದಕ್ಕಾಗಿ ಬಂಧನಕ್ಕೊಳಗಾಗಿರುವ ಜೆಎನ್ ಯು ವಿವಿ ವಿದ್ಯಾರ್ಥಿ ಸಂಘದ ನಾಯಕ ಕನ್ಹಯ್ಯ ಕುಮಾರ್ ಗೆ ಮಾರ್ಚ್.2 ವರೆಗೆ ನ್ಯಾಯಾಂಗ ಬಂಧನ ವಿಧಿಸಿ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಆದೇಶ ನೀಡಿದೆ.
ಇಂದಿನವರಗೆ ಪೊಲೀಸ್ ವಶದಲ್ಲಿದ್ದ ಜೆಎನ್ ಯು ವಿವಿಯ ವಿದ್ಯಾರ್ಥಿ ನಾಯಕನನ್ನು ಇನ್ನೂ ಹೆಚ್ಚಿನ ವಿಚಾರಣೆಗೆ ಒಳಪಡಿಸುವ ಅಗತ್ಯವಿಲ್ಲ ಎಂದು ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದ ಕಾರಣ, ದೆಹಲಿಯ ಪಟಿಯಾಲ ಕೋರ್ಟ್ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಆದೇಶಿಸಿತು.
ವಿದ್ಯಾರ್ಥಿ ಸಂಘಟನೆ ನಾಯಕನಾಗಿರುವ ಕನ್ಹಯ್ಯ ಕುಮಾರ್ ಅವರ ಮೇಲೆ ಹಲ್ಲೆ ನಡೆದಿರುವುದನ್ನು ಪರಿಗಣಿಸಿರುವ ನ್ಯಾಯಾಲಯ ಬಂಧಿತ ವಿದ್ಯಾರ್ಥಿ ನಾಯಕನಿಗೆ ಸೂಕ್ತ ಭದ್ರತೆ ಒದಗಿಸುವಂತೆ ತಿಹಾರ ಜೈಲು ಅಧಿಕಾರಿಗಳಿಗೆ ಸೂಚಿಸಿತು.
ವಿಶ್ವವಿದ್ಯಾನಿಲಯದ ಕ್ಯಾಂಪಸ್ ನಲ್ಲಿ ಕನ್ಹಯ್ಯ ಕುಮಾರ್ ನೇತೃತ್ವದ ವಿದ್ಯಾರ್ಥಿ ಸಂಘಟನೆಯವರು ದೇಶವಿರೋಧಿ ಘೋಷಣೆ ಕೂಗಿದ್ದಾರೆಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಫೆ.12 ರಂದು ಕನ್ಹಯ್ಯ ಕುಮಾರ್ ನ್ನು ಬಂಧಿಸಲಾಗಿತ್ತು.