‘ಹತ್ಯೆ ಮಾಡಲೆಂದೇ ಭದ್ರತೆ ಹಿಂಪಡೆಯಲಾಗಿತ್ತು, ರಾಜೀವ್ ಭದ್ರತೆ ಬಗ್ಗೆ ಆತಂಕವಿತ್ತು, ರಾಹುಲ್ ಎಚ್ಚರಿಕೆ ಕೊಟ್ಟಿದ್ದ': ಸೋನಿಯಾ ಗಾಂಧಿ; Video
ತಮ್ಮ ಬೆಲಾಂಗಿಂಗ್: ಎ ಜರ್ನಿ ಆಫ್ ಲವ್ ಪುಸ್ತಕದ ಕುರಿತು ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ನಡೆಸಿದ ಸಂವಾದದಲ್ಲಿ ಸೋನಿಯಾ ಗಾಂಧಿ ಈ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಗೆ ಸುಲಭವಾಗಿ ದಾರಿ ಮಾಡಿಕೊಡುವ ಉದ್ದೇಶದಿಂದಲೇ ಅವರ ಭದ್ರತಾ ವ್ಯವಸ್ಥೆಯನ್ನು ಉದ್ದೇಶಪೂರ್ವಕವಾಗಿ ಹಿಂಪಡೆಯಲಾಗಿತ್ತು ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸಿದ್ದಾರೆ.
ರಾಜಕೀಯ ಪ್ರವಾಸಗಳ ಸಂದರ್ಭದಲ್ಲಿ ತಮ್ಮ ಪತಿ ಎದುರಿಸುತ್ತಿದ್ದ ಬೆದರಿಕೆಗಳನ್ನು ಸ್ಮರಿಸಿದ ಅವರು, ರಾಜೀವ್ ಗಾಂಧಿ ಅವರ ಸುರಕ್ಷತೆ ಬಗ್ಗೆ ತಾವು ಪದೇಪದೆ ಕಳವಳ ವ್ಯಕ್ತಪಡಿಸಿದ್ದರೂ, ತಮ್ಮ ಎಚ್ಚರಿಕೆಗಳಿಗೆ ಸೂಕ್ತ ಗಮನ ನೀಡಿರಲಿಲ್ಲ ಎಂದು ಹೇಳಿದ್ದಾರೆ.
ತಮ್ಮ ಬೆಲಾಂಗಿಂಗ್: ಎ ಜರ್ನಿ ಆಫ್ ಲವ್ ಪುಸ್ತಕದ ಕುರಿತು ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ನಡೆಸಿದ ಸಂವಾದದಲ್ಲಿ ಸೋನಿಯಾ ಗಾಂಧಿ ಈ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ವಿಡಿಯೊದಲ್ಲಿನ ಈ ಸಂವಾದದಲ್ಲಿ ತಮ್ಮ ವಿವಾಹ, ಕುಟುಂಬದ ನೆನಪುಗಳು, ರಾಜಕೀಯದ ಪ್ರಭಾವ ಹಾಗೂ ರಾಜೀವ್ ಗಾಂಧಿ ಅವರ ಹತ್ಯೆಗೆ ಸಂಬಂಧಿಸಿದ ನೋವಿನ ಅನುಭವಗಳು ಸೇರಿದಂತೆ ತಮ್ಮ ಬದುಕಿನ ಹಲವು ವೈಯಕ್ತಿಕ ಕ್ಷಣಗಳನ್ನು ಮೆಲುಕು ಹಾಕಲಾಗಿದೆ.
ರಾಜೀವ್ ಗಾಂಧಿ ಭದ್ರತೆ ಕುರಿತು ರಾಹುಲ್ ಎಚ್ಚರಿಕೆ ನೀಡಿದ್ದನ್ನು ಸ್ಮರಿಸಿದ ಸೋನಿಯಾ ಗಾಂಧಿ
ಸಂವಾದದ ವೇಳೆ ವಿರೋಧ ಪಕ್ಷದ ನಾಯಕರಾಗಿದ್ದ ಸಂದರ್ಭದಲ್ಲಿ ರಾಜೀವ್ ಗಾಂಧಿ ಕೈಗೊಂಡಿದ್ದ ರಾಜಕೀಯ ಪ್ರವಾಸಗಳನ್ನು ಸೋನಿಯಾ ಗಾಂಧಿ ಸ್ಮರಿಸಿದರು. ಈ ಪ್ರವಾಸಗಳ ವೇಳೆ ಮಾಜಿ ಪ್ರಧಾನಿ ಕೆಲವು ಸಂದರ್ಭಗಳಲ್ಲಿ ತೆರೆದ ಜೀಪ್ನಲ್ಲಿ ಪ್ರಯಾಣಿಸುತ್ತಿದ್ದರು. ಪ್ರತಿಭಟನೆಗಳು ಹಾಗೂ ಕಲ್ಲು ತೂರಾಟದ ಘಟನೆಗಳನ್ನೂ ಎದುರಿಸಿದ್ದರು.
ಅಂತಹ ಒಂದು ಪ್ರವಾಸವನ್ನು ಅತ್ಯಂತ ಆತಂಕಕಾರಿ ಎಂದು ಬಣ್ಣಿಸಿದ ಸೋನಿಯಾ ಗಾಂಧಿ, ವಿಶೇಷವಾಗಿ ವಿರೋಧ ಪಕ್ಷಗಳ ಆಡಳಿತವಿದ್ದ ರಾಜ್ಯಗಳಿಗೆ ಭೇಟಿ ನೀಡುವಾಗ ರಾಜೀವ್ ಗಾಂಧಿ ಅವರ ಭದ್ರತೆಯ ಬಗ್ಗೆ ತಮಗೆ ಚಿಂತೆಯಾಗುತ್ತಿತ್ತು. ಅವರ ರಕ್ಷಣೆಯ ಹೊಣೆ ಹೊತ್ತಿದ್ದ ಅಧಿಕಾರಿಗಳು ಭದ್ರತಾ ಕಳವಳಗಳನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ಆರೋಪಿಸಿದರು.
ಆ ಪ್ರವಾಸದ ವೇಳೆ ತಂದೆಯೊಂದಿಗೆ ತೆರಳಿದ್ದ ರಾಹುಲ್ ಗಾಂಧಿ ಕೂಡ ಪ್ರತಿಭಟನೆ ಮತ್ತು ಕಲ್ಲು ತೂರಾಟವನ್ನು ಕಣ್ಣಾರೆ ಕಂಡಿದ್ದರು. ಮನೆಗೆ ಮರಳಿದ ಬಳಿಕ ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದ ರಾಹುಲ್, ಅಮ್ಮಾ, ತಂದೆಯವರ ಭದ್ರತೆ ಬಗ್ಗೆ ನಾವು ಏನಾದರೂ ಮಾಡದಿದ್ದರೆ, ನಾನು ಶೀಘ್ರದಲ್ಲೇ ಅವರ ಅಂತ್ಯಕ್ರಿಯೆಗೆ ಬರಬೇಕಾಗುತ್ತದೆ ಎಂಬುದು ನನಗೆ ಗೊತ್ತಿದೆ ಎಂದು ಹೇಳಿದ್ದನ್ನು ಸೋನಿಯಾ ಗಾಂಧಿ ಸ್ಮರಿಸಿದರು.
ಆ ಘಟನೆಗೂ ಮುನ್ನ ರಾಜೀವ್ ಗಾಂಧಿ ಅವರ ಭದ್ರತೆ ಬಗ್ಗೆ ತಮಗೆ ಆತಂಕವಿತ್ತು. ಆದರೆ, ಬಿಹಾರ ಪ್ರವಾಸವು ತಮ್ಮ ಕಳವಳವನ್ನು ತೀವ್ರವಾಗಿ ವ್ಯಕ್ತಪಡಿಸಲು ನಿರ್ಣಾಯಕ ಸಂದರ್ಭವಾಯಿತು ಎಂದು ಹೇಳಿದರು. ಅವರ ಭದ್ರತಾ ವ್ಯವಸ್ಥೆಯನ್ನು ಹಿಂಪಡೆದ ನಿರ್ಧಾರ ಆಕಸ್ಮಿಕವಾಗಿರಲಿಲ್ಲ, ಉದ್ದೇಶಪೂರ್ವಕವಾಗಿ ಕೈಗೊಳ್ಳಲಾಗಿತ್ತು ಎಂದು ಸೋನಿಯಾ ಗಾಂಧಿ ಆರೋಪಿಸಿದರು.
ನಿಮ್ಮ ತಂದೆಯವರನ್ನು ಕೊಲ್ಲಿಸುವುದಕ್ಕಾಗಿಯೇ ಅವರ ಭದ್ರತೆಯನ್ನು ತೆಗೆದುಹಾಕಲಾಗಿತ್ತು. ಅವರ ಭದ್ರತೆಯನ್ನು ಹಿಂಪಡೆದದ್ದು ಆಕಸ್ಮಿಕ ಘಟನೆಯಾಗಿರಲಿಲ್ಲ. ಅವರನ್ನು ಕೊಲ್ಲಿಸುವ ಉದ್ದೇಶದಿಂದಲೇ ಹಾಗೆ ಮಾಡಲಾಗಿತ್ತು ಎಂದರು.
ತಾಯಿ ಪುಸ್ತಕದಲ್ಲಿ ಕೆಲವು ನೆನಪುಗಳನ್ನು ಕೈಬಿಟ್ಟಿದ್ದಾರೆ ಎಂದ ರಾಹುಲ್ ಗಾಂಧಿ
ಎಕ್ಸ್ನಲ್ಲಿ ವಿಡಿಯೊ ಹಂಚಿಕೊಂಡ ರಾಹುಲ್ ಗಾಂಧಿ, 500ಕ್ಕೂ ಹೆಚ್ಚು ಪುಟಗಳ ಪುಸ್ತಕವಾಗಿದ್ದರೂ ತಮ್ಮ ತಾಯಿ ಕೆಲವು ನೆನಪುಗಳನ್ನು ಅದರಲ್ಲಿ ಉಲ್ಲೇಖಿಸಿಲ್ಲ ಎಂದು ಹೇಳಿದ್ದಾರೆ. ಯೋಜಿಸಿದಂತೆ ಪ್ರಸ್ತಾಪ ಕಾರ್ಯರೂಪಕ್ಕೆ ಬರಲಿಲ್ಲ. ನನ್ನ ಏಳನೇ ಹುಟ್ಟುಹಬ್ಬವೂ ಹಾಗೆಯೇ ನಡೆಯಲಿಲ್ಲ. 2004ರ ನಿರ್ಧಾರ ನಮ್ಮಲ್ಲಿ ಕೆಲವರಿಗೆ ನಿರಾಳತೆ ನೀಡಿದರೆ, ಇತರರಿಗೆ ಸಂತಸ ತಂದಿತು. ತಂದೆಯವರ ಭದ್ರತೆಯನ್ನು ಹಿಂಪಡೆಯುವ ಹಿಂದೆ ಒಂದು ಉದ್ದೇಶವಿತ್ತು. 500ಕ್ಕೂ ಹೆಚ್ಚು ಪುಟಗಳ ಪುಸ್ತಕ ಬರೆದಿದ್ದರೂ, ಅಮ್ಮ ಕೆಲವು ವಿಷಯಗಳನ್ನು ಅದರಲ್ಲಿ ಉಲ್ಲೇಖಿಸಿಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



