ಅಹಮದಾಬಾದ್: ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಆಗ್ರಹಿಸಿ, ಹೋರಾಟ ನಡೆಸಿ ಜೈಲು ಸೇರಿರುವ ಹಾರ್ದಿಕ್ ಪಟೇಲ್ ದಿಢೀರನೇ ಜೈಲಿನಲ್ಲೇ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಲಾಜ್ಪೋರೆ ಜೈಲಿನಲ್ಲಿರುವ ಹಾರ್ದಿಕ್ ಪಟೇಲ್, ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಆಗ್ರಹಿಸಿ ಗುರುವಾರ ಬೆಳಗ್ಗಿನಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ ಎಂದು ಜೈಲು ಅಧಿಕಾರಿ ಎಸ್ ಎಲ್ ದುಸಾ ತಿಳಿಸಿದ್ದಾರೆ.
ಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ಗುಜರಾತ್ ಸರ್ಕಾರದ ಜೊತೆ ಮಾತುಕತೆ ನಡೆಸಲು ಸಮುದಾಯದ ಇತರೆ ನಾಯಕರು ಇಚ್ಛೆ ವ್ಯಕ್ತಪಡಿಸಿದ ಬೆನ್ನಲ್ಲೆ ಹಾರ್ದಿಕ್ ಪಟೇಲ್ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಹಾರ್ದಿಕ್ ಪಟೇಲ್ ಅವರ ಆಪ್ತರಾದ ಕೇತನ್ ಪಟೇಲ್, ಚಿರಾಗ್ ಪಟೇಲ್ ಮತ್ತು ದಿನೇಶ್ ಬಾಂಭನಿಯಾ ಅವರು, ಮೀಸಲಾತಿ ಕುರಿತು ಮಾತುಕತೆ ನಡೆಸಲು ಸಿದ್ಧ ಎಂದು ಮುಖ್ಯಮಂತ್ರಿ ಅನಂದಿಬೇನ್ ಪಟೇಲ್ ಅವರಿಗೆ ಪತ್ರ ಬರೆದಿದ್ದರು.
ಆದರೆ ಈ ಪತ್ರಕ್ಕೆ ಹಾರ್ದಿಕ್ ಪಟೇಲ್ ಸಹಿಯಾಗಿರಲಿಲ್ಲ. ತಮ್ಮ ಆಪ್ತರೇ ಈ ರೀತಿ ಮಾತುಕತೆ ಮುಂದಾಗಿದ್ದಾರೆಂಬ ಬೇಸರದಿಂದ ಹಾರ್ದಿಕ್ ಪಟೇಲ್ ಉಪವಾಸ ಕೈಗೊಂಡಿರಬಹುದು ಎಂದು ಹೇಳಲಾಗುತ್ತಿದೆ.