

ನವದೆಹಲಿ: ದೇಶದ್ರೋಹ ಕಾನೂನಿನಡಿ ಬಂಧನಕ್ಕೊಳಗಾಗಿರುವ ಜೆಎನ್ ಯು ವಿದ್ಯಾರ್ಥಿ ಸಂಘದ ನಾಯಕ ಕನ್ಹಯ್ಯ ಕುಮಾರ್ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ವರದಿ ಸಲ್ಲಿಸಲು ದೆಹಲಿ ಹೈಕೋರ್ಟ್ ಪೊಲೀಸರಿಗೆ ಸೂಚನೆ ನೀಡಿದೆ.
ಕನ್ಹಯ್ಯ ಕುಮಾರ್ ಜಾಮೀನು ಅರ್ಜಿ ವಿಚಾರಣೆ ನಡೆಸಲು ನಿರಾಕರಿಸಿದ್ದ ಸುಪ್ರೀಂ ಕೋರ್ಟ್, ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ನಲ್ಲಿ ಸಲ್ಲಿಸುವಂತೆ ಹೇಳಿತ್ತು. ಈಗ ಜಾಮೀನು ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿರುವ ದೆಹಲಿ ಹೈಕೋರ್ಟ್ ವರದಿ ಸಲ್ಲಿಸುವಂತೆ ದೆಹಲಿ ಪೊಲೀಸ್ ಇಲಾಖೆಗೆ ಸೂಚನೆ ನೀಡಿದೆ. ಕನ್ಹಯ್ಯ ಕುಮಾರ್ ಗೆ ಜಾಮೀನು ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ದೆಹಲಿ ಪೊಲೀಸರು ಇನ್ನೂ ವಿಚಾರಣೆ ಮುಂದುವರೆದಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಪೊಲೀಸರು ಜಾಮೀನು ನೀಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಫೆ.24 ರೊಳಗೆ ತನಿಖಾ ಪ್ರಗತಿ ವರದಿ ಸಲ್ಲಿಸಬೇಕಿದೆ.