ನವದೆಹಲಿ: ಯುರೋಪ್ ಪ್ರವಾಸ ಮುಗಿಸಿ ಬಂದ ನಂತರ ರಾಹುಲ್ ಗಾಂಧಿಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ವಹಿಸಿಕೊಡಲಾಗುವುದು ಎಂಬ ಸೂಚನೆ ಸಿಕ್ಕಿವೆ.
ಅಧ್ಯಕ್ಷ ಸ್ಥಾನ ನಿಭಾಯಿಸಲು ರಾಹುಲ್ ಈಗ ಸಮರ್ಥರಾಗಿದ್ದಾರೆ. ಅಧ್ಯಕ್ಷ ಸ್ಥಾನದಲ್ಲಿರಲು ರಾಹುಲ್‌ಗೆ ಆಗ್ರಹವಿಲ್ಲ ಎಂಬ ರೀತಿಯಲ್ಲಿ ಬಂದ ಸುದ್ದಿಗಳು ಸತ್ಯಕ್ಕೆ ದೂರವಾದವುಗಳಾಗಿವೆ. ಅಸ್ಸಾಂ ಚುನಾವಣೆ ಮುಗಿಯುವಲ್ಲಿಯವರೆಗೆ ರಾಹುಲ್ ಅಧ್ಯಕ್ಷ ಸ್ಥಾನ ವಹಿಸುವುದಿಲ್ಲ ಎಂದು ಹೇಳಿದ್ದಾರೆ ಎಂಬ ಸುದ್ದಿಯಲ್ಲಿಯೂ ಹುರುಳಿಲ್ಲ ಎಂದು ಕಾಂಗ್ರೆಸ್ ಪಕ್ಷದ ಬಲ್ಲಮೂಲಗಳು ಸ್ಪಷ್ಟ ಪಡಿಸಿವೆ.
ಜನವರಿ 18ರ ನಂತರ ರಾಹುಲ್ ಯುರೋಪ್‌ನಿಂದ ಪ್ರವಾಸ ಮುಗಿಸಿ ಬರಲಿದ್ದಾರೆ. ಇದಾದ ನಂತರ ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸಭೆ ಸೇರಲಾಗುವುದು ಎಂಬ ಸುದ್ದಿಯಿದೆ.
ಅದೇ ವೇಳೆ ರಾಹುಲ್ ಗಾಂಧಿ ಅಧ್ಯಕ್ಷಸ್ಥಾನವನ್ನೇರುತ್ತಾರೆ ಎಂಬುದರ ಬಗ್ಗೆ ಕಾಂಗ್ರೆಸ್ ಪಕ್ಷ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ರಾಹುಲ್ ಪಟ್ಟಾಭಿಷೇಕದ ಬಗ್ಗೆ ಕಾಂಗ್ರೆಸ್ ಸಂಸ್ಥಾಪನಾ ದಿನದಂದು ಸೋನಿಯಾ ಗಾಂಧಿಯವರಲ್ಲಿ ಕೇಳಿದಾಗ, ಈ ಪ್ರಶ್ನೆ ರಾಹುಲ್ ಗೆ ಕೇಳಿ ಎಂಬ ಉತ್ತರ ಸಿಕ್ಕಿತ್ತು.
ರಾಹುಲ್ ಅಧ್ಯಕ್ಷ ಸ್ಥಾನ ಸ್ವೀಕರಿಸಬೇಕೆಂಬುದು ಕಾಂಗ್ರೆಸ್ ಕಾರ್ಯಕರ್ತರೆಲ್ಲರ ಆಗ್ರಹವಾಗಿದೆ ಎಂದು ಕೆಲವು ತಿಂಗಳ ಹಿಂದೆಯಷ್ಟೇ ಹಿರಿಯ ನೇತಾರ ದಿಗ್ವಿಜಯ್ ಸಿಂಗ್ ಹೇಳಿದ್ದರು