ನವದೆಹಲಿ: ದೇಶದಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಇನ್‌ಕ್ರೆಡಿಬಲ್ ಇಂಡಿಯಾ ಅಭಿಯಾನದ ರಾಯಭಾರಿಯಾಗಿದ್ದ ಅಮೀರ್‌ಖಾನ್‌ನ್ನು ರಾಯಭಾರಿ ಸ್ಥಾನದಿಂದ ಕೈ ಬಿಟ್ಟಿಲ್ಲ ಎಂದು ಪ್ರವಾಸೋದ್ಯಮ ಸಚಿವಾಲಯ ಹೇಳಿದೆ.
ಬಾಲಿವುಡ್ ನಟ ಅಮೀರ್‌ಖಾನ್ ರನ್ನು ಇನ್‌ಕ್ರೆಡಿಬಲ್ ಇಂಡಿಯಾ ಅಭಿಯಾನ ರಾಯಭಾರಿ ಸ್ಥಾನದಿಂದ ಕೈಬಿಡಲಾಗಿದೆ ಎಂಬ ಸುದ್ದಿಗಳು ಸತ್ಯಕ್ಕೆ ದೂರವಾದವುಗಳು ಎಂದು ಪ್ರವಾಸೋದ್ಯಮ ಸಚಿವಾಲಯ ಹೇಳಿಕೆ ನೀಡಿದೆ.
ಮ್ಯಾಕೆನ್ ವರ್ಲ್ಡ್ ಗ್ರೂಪ್ ಕ್ರಿಯೇಟಿವ್ ಏಜೆನ್ಸಿ ಜತೆ ಸಚಿವಾಲಯ ಒಪ್ಪಂದ ಮಾಡಿಕೊಂಡಿದ್ದು, ಈ ಏಜೆನ್ಸಿ ಈ ಅಭಿಯಾನದ ಜಾಹೀರಾತು ಹೊಣೆ ಹೊತ್ತಿದೆ. ಈ ಜಾಹೀರಾತಿನಿಂದ ಖಾನ್‌ನ್ನು ಕೈ ಬಿಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದ್ದು, ಅದು ನಿಜವಲ್ಲ ಎಂದು ಸಚಿವಾಲಯ ಹೇಳಿದೆ.
ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಭಾರತದಲ್ಲಿ ಅಸಹಿಷ್ಣುತೆ ಇದೆ. ಆದ್ದರಿಂದ ನನ್ನ ಪತ್ನಿ ದೇಶ ಬಿಟ್ಟು ಹೋಗೋಣವೇ? ಎಂದು ಕೇಳುತ್ತಿದ್ದಾಳೆ ಎಂದು ಅಮೀರ್ ಖಾನ್ ಹೇಳಿದ್ದು ವಿವಾದ ಸೃಷ್ಟಿಯಾಗಿತ್ತು.
ಅಮೀರ್ ಖಾನ್ ಈ ರೀತಿ ಹೇಳುವ ಮೂಲಕ ದೇಶದ್ರೋಹ ಮಾಡುತ್ತಿದ್ದಾರೆ. ಆದ್ದರಿಂದ ಅವರು ನಟಿಸಿರುವ ಜಾಹೀರಾತು, ಸಿನಿಮಾಗಳಿಗೆ ಧಿಕ್ಕಾರ ಕೂಗಿ ಜನರು ಪ್ರತಿಭಟನೆ ಮಾಡಿದ್ದರು.