ನವದೆಹಲಿ: ಕೇಂದ್ರ ಜೊತೆ ಮತ್ತೊಂದು ಸುತ್ತಿನ ಹೋರಾಟ ಆರಂಭಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ಕೋರ್ಟ್ ಮಾತ್ರ ದೆಹಲಿ ಸರ್ಕಾರದ ತನಿಖೆಯನ್ನು ತಡೆಯಬಹುದು ಎಂದು ಶುಕ್ರವಾರ ಹೇಳಿದ್ದಾರೆ.
ಕೇಂದ್ರ ಗೃಹ ಸಚಿವಾಲಯ ಡಿಡಿಸಿಎ ಹಗರಣಕ್ಕೆ ಸಂಬಂಧಿಸಿದ ದೆಹಲಿ ಸರ್ಕಾರದ ತನಿಖಾ ಆಯೋಗ ಕಾನೂನು ಬಾಹಿರ ಎಂದು ಘೋಷಿಸಿದ ಬಳಿಕ ಸರಣಿ ಟ್ವೀಟ್ ಮಾಡಿರುವ ಕೇಜ್ರಿವಾಲ್, ಕಾನೂನು ಮತ್ತು ಸಂವಿಧಾನದ ಪ್ರಕಾರ ತನಿಖಾ ಆಯೋಗ ರಚಿಸಿದ್ದು, ಆಯೋಗದ ತನಿಖೆ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಒಂದು ವೇಳೆ ನಿಮಗೆ ತನಿಖಾ ಆಯೋಗದ ಬಗ್ಗೆ ಅಸಮಾಧಾನವಿದ್ದರೆ ಕೋರ್ಟ್‌ಗೆ ಹೋಗಿ ಎಂದು ಲೆಫ್ಟಿನೆಂಟ್ ಗವರ್ನರ್, ಕೇಂದ್ರ ಗೃಹ ಸಚಿವಾಲಯ ಹಾಗೂ ಪ್ರಧಾನಿ ಕಚೇರಿಗೆ ದೆಹಲಿ ಸಿಎಂ ಸಲಹೆ ನೀಡಿದ್ದಾರೆ. ಅಲ್ಲದೆ ಕೋರ್ಟ್ ಆದೇಶದಿಂದ ಮಾತ್ರ ತನಿಖೆ ತಡೆಯಲು ಸಾಧ್ಯ ಎಂದು ಹೇಳಿದ್ದಾರೆ.
ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಯ(ಡಿಡಿಸಿಎ) ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಸರ್ಕಾರ ರಚಿಸಿರುವ ತನಿಖಾ ಆಯೋಗ ಕಾನೂನು ಬಾಹಿರ ಮತ್ತು ಅಸಂವಿಧಾನಿಕ ಎಂದು ಕೇಂದ್ರ ಹೇಳಿತ್ತು.