

ಮಧುರೈ: ಸಾಂಪ್ರದಾಯಿಕವಾಗಿ ತಮಿಳುನಾಡಿನಲ್ಲಿ ನಡೆದುಕೊಂಡು ಬಂದಿರುವ ಜಲ್ಲಿಕಟ್ಟು ಸ್ಪರ್ಧೆಗೆ ನೀಡಿರುವ ಮಧ್ಯಂತರ ತಡೆಯಾಜ್ಞೆಯನ್ನು ತೆರವುಗೊಳಿಸಲು ಸುಪ್ರೀಕೋರ್ಟ್ ನಿರಾಕರಿಸಿರುವ ಹಿನ್ನೆಲೆಯಲ್ಲಿ ತಮಿಳುನಾಡಿನಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳು ಗುರುವಾರ ತೀವ್ರಗೊಂಡಿದೆ.
ಜಲ್ಲಿಕಟ್ಟು ಸ್ಪರ್ಧೆಯನ್ನು ಸಾಂಪ್ರದಾಯಿಕ ಸ್ಪರ್ಧೆಯಾಗಿ ಅಲ್ಲಿನ ಜನರು ಆಚರಿಸಿಕೊಂಡು ಬಂದಿದ್ದು, ಈ ಸ್ಪರ್ಧೆಯನ್ನು ಪ್ರತೀವರ್ಷ ಪೊಂಗಲ್ ಹಬ್ಬದ್ದಂದು ಆಚರಿಸಲಾಗುತ್ತದೆ. ಆದರೆ, ಇದೀಗ ಈ ಸ್ಪರ್ಧೆಗೆ ನೀಡಿರುವ ಮಧ್ಯಂತರ ತಡೆಯಾಜ್ಞೆಯನ್ನು ತೆರವುಗೊಳಿಸಲು ಸುಪ್ರೀಂಕೋರ್ಟ್ ನಿರಾಕರಿಸಿರುವ ಹಿನ್ನೆಲೆಯಲ್ಲಿ ತೀವ್ರವಾಗಿ ಹತಾಶರಾಗಿರುವ ಜನತೆ ತಮಿಳುನಾಡಿನಾದ್ಯಂತ ಹಲವು ಪ್ರತಿಭಟನೆಗಳನ್ನು ನಡೆಸುತ್ತಿದೆ.
ಜಲ್ಲಿಕಟ್ಟು ಸ್ಪರ್ಧೆಗೆ ಕೋರ್ಟ್ ಆದೇಶ ಅಡ್ಡಿಯಾಗಿರುವುದರಿಂದ ಉದ್ರಿಕ್ತಗೊಂಡಿರುವ ಅಲ್ಲಿನ ಜನರು ಚೆನ್ನೈ, ಮದುರೆ, ತಿರುಚಿನಾಪಳ್ಳಿ, ಪುದುಕೋಟ್ಟೈ ಮತ್ತು ಸೇಲಂ ಸೇರಿದಂತೆ ಇನ್ನಿತರೆ ಪ್ರದೇಶಗಳಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ. ಅಲ್ಲದೆ, ಪ್ರತಿಭಟನಾನಿರತ ಹಲವರು ಕಪ್ಪು ಬಾವುಟಗಳನ್ನು ಪ್ರದರ್ಶಿಸಿದ್ದಾರೆಂದು ವರದಿಗಳು ತಿಳಿಸಿವೆ.
ಶಿವನಗಂಗಾ ಜಿಲ್ಲೆಯಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಿದ್ದ ಜನರು ದೇವಕೊಟ್ಟಾಯ್ ರೈಲ್ವೆ ನಿಲ್ದಾಣದ ಬಳಿ ರೈಲನ್ನು ತಡೆಹಿಡಿಯಲು ಯತ್ನ ನಡೆಸಿದ ಹಿನ್ನೆಲೆಯಲ್ಲಿ ಪೊಲೀಸರು 70ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಇದಲ್ಲದೆ, ಕೆಕೆ ನಗರದ ಜನರು ಉಪವಾಸ ಸತ್ಯಾಗ್ರಹ ಮಾಡಲು ಮುಂದಾಗಿದ್ದರು. ಆದರೆ, ಈ ವೇಳೆ ಡಿಸಿ ಬಂದು ಸಮಾಧಾನ ಹೇಳಿ ಸತ್ಯಾಗ್ರಹವನ್ನು ಅಲ್ಲೇ ಕೈಬಿಡುವಂತೆ ಮಾಡಿದ್ದಾರೆ. ಇನ್ನು ಕೆಲವೆಡೆ ಸ್ಪರ್ಧೆ ನಿಷೇಧದಿಂದಾಗಿ ತೀವ್ರ ಹತಾಶಗೊಂಡ ವ್ಯಕ್ತಿಯೊಬ್ಬ ತಿರುಚನಾಪಳ್ಳಿಯಲ್ಲಿ ಮೈಗೆ ಬೆಂಕಿ ಹೊತ್ತಿಸಿಕೊಂಡು ಆತ್ಮಾಹುತಿಗೆ ಯತ್ನಿಸಿದ್ದಾರೆ. ಈ ವೇಳೆ ಮಧ್ಯಪ್ರವೇಶ ಮಾಡಿರುವ ಪೊಲೀಸರು ಆತನ ಯತ್ನವನ್ನು ವಿಫಲವಾಗುವಂತೆ ಮಾಡಿದ್ದಾರೆ.
ಪ್ರತಿಭಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಅಧಿಕಾರಿಗಳು, ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲಾ ಬೆಳವಣಿಗೆಗಳನ್ನು ಗಮನಹರಿಸುತ್ತಿದ್ದು, ನ್ಯಾಯಾಲಯ ಆದೇಶವನ್ನು ತಿರಸ್ಕರಿಸುವ ಪ್ರಯತ್ನಗಳೇನಾದರೂ ನಡೆದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.