ಹೈದರಾಬಾದ್: ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ ಸಂಬಂಧ ವಿವಿಯಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಹಾಗೂ ಪ್ರಾಧ್ಯಾಪಕರ ಪ್ರತಿಭಟನೆಗೆ ಕೈಜೋಡಿಸಿರುವ ವಿವಿ ನೌಕರರ ಕಲ್ಯಾಣ ಸಂಘ ಇಂದು 'ಪ್ರತಿಭಟನಾ ದಿನ' ಆಯೋಜಿಸಿದೆ.
ನಿನ್ನೆಯಿಂದ ಆರಂಭವಾಗಿರುವ ಎಸ್‌ಸಿ/ಎಸ್‌ಟಿ ಶಿಕ್ಷಕರ ವೇದಿಕೆಯ ಅಮರಣಾಂತ ಉಪವಾಸ ಸತ್ಯಾಗ್ರಹ ಮುಂದುವರೆದಿದೆ. ಅಲ್ಲದೆ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ವಿದ್ಯಾರ್ಥಿಗಳು ಸಹ ಇಂದಿನಿಂದ ಅಮರಣಾಂತ ಉಪವಾಸ ಆರಂಭಿಸಿದ್ದಾರೆ.
ವಿವಿ ಕುಲಪತಿ ಅಪ್ಪಾ ರಾವ್ ಅವರನ್ನು ವಜಾಗೊಳಿಸಬೇಕು ಮತ್ತು ಮಧ್ಯಂತರ ಕುಲಪತಿಯಾಗಿರುವ ವಿಪಿನ್ ಶ್ರೀವಾಸ್ತವ ಅವರನ್ನು ಹುದ್ದೆಯಿಂದ ಕೆಳಗಿಳಿಸಬೇಕು ಎಂದು ಒತ್ತಾಯಿಸಿ ಶಿಕ್ಷಕರ ವೇದಿಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಪತ್ರ ಬರೆದಿದೆ.