ದೇಶ

ಚಲಿಸುತ್ತಿದ್ದ ರೈಲಿನ AC ಬೋಗಿಯಲ್ಲಿ ಶಂಖ ಊದಿ ದೀಪ ಹಚ್ಚಿ ಪೂಜೆ ಮಾಡಿದ ವ್ಯಕ್ತಿ; Viral Video

ಚಲಿಸುತ್ತಿದ್ದ ರೈಲಿನ AC ಬೋಗಿಯಲ್ಲಿ ಶಂಖ ಊದಿ ದೀಪ ಹಚ್ಚಿ ಪೂಜೆ ಮಾಡಿದ ವ್ಯಕ್ತಿ; Viral Video
ಎಸಿ ಬೋಗಿಯೊಳಗೆ ಶಂಖ ಊದಿ ಪೂಜೆ ಮಾಡಿದ ವ್ಯಕ್ತಿ
Published On :

ಚಲಿಸುತ್ತಿದ್ದ ರೈಲಿನ ಎಸಿ ಬೋಗಿಯೊಳಗೆ ವ್ಯಕ್ತಿ ಶಂಖ ಊದಿ, ಎಣ್ಣೆ ದೀಪ ಹಚ್ಚಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪ್ರಯಾಣಿಕರ ಸುರಕ್ಷತೆ ಕುರಿತು ಆತಂಕ ಮೂಡಿಸಿದೆ.

ವ್ಯಕ್ತಿ ಶಂಖ ಊದಿ, ಉರಿಯುತ್ತಿರುವ ದೀಪದಿಂದ ಆರತಿ ಮಾಡುತ್ತಿರುವುದು ವಿಡಿಯೊದಲ್ಲಿದೆ. ಇತರ ಪ್ರಯಾಣಿಕರೂ ಇರುವ ಸೀಮಿತ ಸ್ಥಳದಲ್ಲಿ ತೆರೆದ ಸ್ಥಳದಲ್ಲಿ ಬೆಂಕಿ ಉರಿಸಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.

‘ಗಾಡ್ ಆಫ್ ವಾರ್’ ಎಂಬ ಹೆಸರಿನ ಖಾತೆಯಿಂದ ಈ ವಿಡಿಯೊ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಚಲಿಸುತ್ತಿರುವ ರೈಲಿನಲ್ಲಿ ಇಂತಹ ಧಾರ್ಮಿಕ ಆಚರಣೆಗೆ ಹೇಗೆ ಅವಕಾಶ ನೀಡಲಾಯಿತು ಮತ್ತು ರೈಲ್ವೆ ಸಿಬ್ಬಂದಿ ಇದನ್ನು ಗಮನಿಸಿದ್ದರೇ ಎಂಬ ಪ್ರಶ್ನೆಗಳನ್ನು ನೆಟ್ಟಿಗರು ಎತ್ತಿದ್ದಾರೆ. ಈ ಕುರಿತು ತನಿಖೆ ನಡೆಸಲು ಅನುಕೂಲವಾಗುವಂತೆ ರೈಲ್ವೆ ಸೇವಾ ಕೂಡ ಪೋಸ್ಟ್‌ಗೆ ಪ್ರತಿಕ್ರಿಯಿಸಿ ಘಟನೆಯ ವಿವರಗಳನ್ನು ಕೇಳಿದೆ.

ಚಲಿಸುತ್ತಿದ್ದ ರೈಲಿನಲ್ಲಿ ಎಣ್ಣೆ ದೀಪ ಹಚ್ಚಿ ಆರತಿ ಮಾಡಿದ ವ್ಯಕ್ತಿ

ವಿಡಿಯೊದಲ್ಲಿ ವ್ಯಕ್ತಿ ಬೋಗಿಯೊಳಗೆ ಕುಳಿತು ಅಂಗಿ ಧರಿಸದೆ, ಧೋತಿ ಉಟ್ಟಿದ್ದು, ಹಣೆಯ ಮೇಲೆ ಹಾಗೂ ಮೈಮೇಲೆ ವಿಭೂತಿ ಹಚ್ಚಿಕೊಂಡಿದ್ದಾರೆ.

ಅವರ ಮುಂದೆ ಟೇಬಲ್ ನಲ್ಲಿ ಹೂವುಗಳು ಮತ್ತು ಚೆಂಡು ಹೂವಿನ ಹಾರಗಳಿಂದ ಅಲಂಕರಿಸಿದ ದೇವರ ಫೋಟೋ ಇದೆ. ಪೂಜಾ ಸಾಮಗ್ರಿಗಳಿರುವ ತಟ್ಟೆಗಳು, ಬಟ್ಟಲುಗಳು ಹಾಗೂ ಉರಿಯುತ್ತಿರುವ ಎಣ್ಣೆ ದೀಪವೂ ಮೇಜಿನ ಮೇಲಿರುವುದು ಕಂಡುಬರುತ್ತದೆ.

ಮೊದಲು ವ್ಯಕ್ತಿ ಶಂಖ ಊದಿ, ಬಳಿಕ ಅದನ್ನು ಕೆಳಗಿಟ್ಟು ತನ್ನ ಮುಂದೆ ಜೋಡಿಸಿಟ್ಟಿದ್ದ ಪೂಜಾ ಸಾಮಗ್ರಿಗಳನ್ನು ಬಳಸಿಕೊಂಡು ವಿಧಿವಿಧಾನಗಳನ್ನು ನೆರವೇರಿಸುತ್ತಾರೆ. ಕಿಟಕಿಯ ಮೂಲಕ ಹೊರಗಿನ ದೃಶ್ಯಗಳು ಕಾಣಿಸುತ್ತಿರುವುದರಿಂದ ಪೂಜೆಯ ಸಂದರ್ಭದಲ್ಲಿ ರೈಲು ಚಲಿಸುತ್ತಿರುವುದು ಸ್ಪಷ್ಟವಾಗಿದೆ.

ಹವಾನಿಯಂತ್ರಿತ ಬೋಗಿಯೊಳಗೆ ಉರಿಯುತ್ತಿರುವ ದೀಪ ಬಳಸಿರುವುದು ಪ್ರಮುಖ ಆತಂಕಕ್ಕೆ ಕಾರಣವಾಗಿದೆ. ಇತರ ಪ್ರಯಾಣಿಕರಿಗೆ ಅಪಾಯ ಎದುರಾಗುವ ಸಾಧ್ಯತೆಯ ಬಗ್ಗೆ ಸಾಮಾಜಿಕ ಜಾಲತಾಣ ಬಳಕೆದಾರರು ಪ್ರಶ್ನಿಸಿದ್ದಾರೆ.

ರೈಲಿನ ವಿವರ ಕೇಳಿದ ರೈಲ್ವೆ ಸೇವಾ, ದೂರು ದಾಖಲಿಸುವಂತೆ ಸೂಚನೆ

ಎಕ್ಸ್ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ರೈಲ್ವೆ ಸೇವಾ, ಘಟನೆಯ ಕುರಿತು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಅನುಕೂಲವಾಗುವಂತೆ ಘಟನೆ ನಡೆದ ದಿನಾಂಕ ಮತ್ತು ಸಮಯ, ರೈಲು ಸಂಖ್ಯೆ, ಪಿಎನ್‌ಆರ್ ಅಥವಾ ಯುಟಿಎಸ್ ಸಂಖ್ಯೆ ಹಾಗೂ ದೂರುದಾರರ ಮೊಬೈಲ್ ಸಂಖ್ಯೆಯನ್ನು ಒದಗಿಸುವಂತೆ ಕೇಳಿದೆ.

ಸಹಾಯಕ್ಕಾಗಿ ರೈಲ್ಮದದ್ (RailMadad) ವೆಬ್‌ಸೈಟ್ ಮೂಲಕ ದೂರು ದಾಖಲಿಸುವಂತೆ ಅಥವಾ ರೈಲ್ವೆ ಸಹಾಯವಾಣಿ 139ಕ್ಕೆ ಕರೆ ಮಾಡುವಂತೆ ಸೂಚಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.