

ಚೆನ್ನೈ: ತಮಿಳುನಾಡು ಮೂಲದ ಯುವಕನೊಬ್ಬ ರಾಷ್ಟ್ರಧ್ವಜಕ್ಕೆ ಬೆಂಕಿ ಹಾಕುತ್ತಿರುವ ಫೊಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯುವಕನ ವಿರುದ್ಧ ಇದೀಗ ದೇಶದ್ರೋಹ ಪ್ರಕರಣ ದಾಖಲಿಸಬೇಕು ಎಂಬ ಆಗ್ರಹಗಳು ಕೇಳಿಬರುತ್ತಿವೆ.
ಮೂಲತಃ ತಮಿಳುನಾಡು ಮೂಲದ ನಾಗಪಟ್ಟಣಂ ಮೂಲದ ದಿಲೀಪನ್ ಮಹೇಂದ್ರನ್ ಎಂಬ ಯುವಕ ತನ್ನ ಫೇಸ್ ಬುಕ್ ಖಾತೆಯಲ್ಲಿ ರಾಷ್ಟ್ರಧ್ವಜಕ್ಕೆ ಬೆಂಕಿ ಇಡುತ್ತಿರುವ ಫೊಟೋಗಳನ್ನು ಅಪ್ ಲೋಡ್ ಮಾಡಿದ್ದು, ಯುವಕನ ಈ ದುರ್ವರ್ತನೆಯನ್ನು ಖಂಡಿಸಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರತಿಭಟನೆ ವ್ಯಕ್ತವಾಗುತ್ತಿದೆ. ಇನ್ನು ದಿಲೀಪನ್ ಮಹೇಂದ್ರನ್ ವಿರುದ್ದ ಸಿಆರ್ ನವೀನ್ ಕುಮಾರ್ ಎಂಬ ಪೈಲಟ್ ದೂರು ಕೂಡ ದಾಖಲಿಸಿದ್ದಾರೆ.
ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಆರೋಪದ ಮೇಲೆ ದಿಲೀಪನ್ ನರೇಂದ್ರನ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ, ಕಠಿಣ ಕ್ರಮ ಜರುಗಿಸಬೇಕು ಎಂದು ಸಿಆರ್ ನವೀನ್ ಕುಮಾರ್ ಆಗ್ರಹಿಸಿದ್ದಾರೆ. ಇನ್ನೂ ಕೆಲವು ಖಾತೆದಾರರು ಈತನ ಮೊಬೈಲ್ ಸಂಖ್ಯೆಯನ್ನು ಕೂಡ ಶೇರ್ ಮಾಡಿ ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.