

ಪಣಜಿ: ಆಮ್ ಆದ್ಮಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿರುವ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ದೆಹಲಿಯನ್ನು ಲೂಟಿ ಮಾಡಿದವರು ಈಗ ಗೋವಾ ಲೂಟಿ ಮಾಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕೆಲವು ದೆಹಲಿಗರು ದೆಹಲಿಯನ್ನು ಲೂಟಿ ಮಾಡಿದ ನಂತರ ಗೋವಾದಲ್ಲೂ ಲೂಟಿ ಮಾಡಬಹುದು ಎಂದು ಭಾವಿಸಿ ತಮ್ಮ ಖಾಸಗಿ ಕಾರ್ಯದರ್ಶಿಗಳ ಮೂಲಕ ಲೂಟಿ ಮಾಡಿಸಲು ಅವಕಾಶಕ್ಕಾಗಿ ಕಾಯುತ್ತಿದ್ದಾರೆ ಎಂದು ಮನೋಹರ್ ಪರಿಕ್ಕರ್ ಪರೋಕ್ಷವಾಗಿ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಹಾಗೂ ಅವರ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ವಿರುದ್ಧ ಹರಿಹಾಯ್ದಿದ್ದಾರೆ.
ಕೆಲವರು ಗೋವಾ ಲೂಟಿ ಮಾಡಲು ಯೋಜನೆ ರೂಪಿಸುತ್ತಿದ್ದು ಈ ಬಗ್ಗೆ ಗೋವಾ ರಾಜ್ಯದ ಜನತೆ ಎಚ್ಚರಿಕೆ ವಹಿಸಬೇಕು ಎಂದು ಮನೋಹರ್ ಪರಿಕ್ಕರ್ ಎಚ್ಚರಿಸಿದ್ದಾರೆ. ಅರವಿಂದ್ ಕೇಜ್ರಿವಾಲ್ ಗೋವಾ ಚುನಾವಣೆ ಮೇಲೆ ಕಣ್ಣಿಟ್ಟಿದ್ದು, ಈಗಿನಿಂದ ಗೋವಾ ರಾಜ್ಯದಲ್ಲಿ ಚುನಾವಣಾ ತಯಾರಿ ನಡೆಸುತ್ತಿದ್ದಾರೆ. ಚುನಾವಣಾ ಭಾಗವಾಗಿ ಕೇಜ್ರಿವಾಲ್ ಗೋವಾಗೆ ಭೇಟಿ ನೀಡಿದ್ದು ಬಿಜೆಪಿ- ಆಮ್ ಆದ್ಮಿ ಪಕ್ಷದ ನಾಯಕರು ಪರಸ್ಪರ ವಾಗ್ದಾಳಿಯಲ್ಲಿ ನಿರತರಾಗಿದ್ದಾರೆ.