

ನವದೆಹಲಿ: ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಸೇನಾಪಡೆ ನಾಲ್ವರು ಉಗ್ರರನ್ನು ಹತ್ಯೆ ಮಾಡಿ ಓರ್ವನನ್ನು ಸೆರೆ ಹಿಡಿರುವುದನ್ನು ಕೇಂದ್ರ ಸರ್ಕಾರದ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ದೊಡ್ಡ ಯಶಸ್ಸು ಎಂದು ಅಭಿಪ್ರಾಯಪಟ್ಟಿದ್ದಾರೆ.
ಜು.26 ರ ಬೆಳವಣಿಗೆ ಭಾರತದೊಳಗೆ ಉಗ್ರರು ನುಸುಳುವುದರ ಹಿಂದೆ ಪಾಕಿಸ್ತಾನದ ಕೈವಾಡ ಇದೆ ಎಂಬುದು ಸ್ಪಷ್ಟವಾಗಿದೆ, ಉಗ್ರನನ್ನು ಜೀವಂತ ಸೆರೆ ಹಿಡಿಯುವುದು ದೊಡ್ಡ ಯಶಸ್ಸು. ಇದರಿಂದ ಪಾಕಿಸ್ತಾನದ ಯೋಜನೆಗಳು ತಿಳಿಯುವುದಕ್ಕೆ ಸಹಕಾರಿಯಾಗಲೂಬಹುದು ಎಂದು ಕಿರಣ್ ರಿಜಿಜು ಹೇಳಿದ್ದಾರೆ.
ಕುಪ್ವಾರ ಜಿಲ್ಲೆಯಲ್ಲಿ ಉಗ್ರನನ್ನು ಜೀವಂತ ಸೆರೆ ಹಿಡಿರುವ ಸೇನೆ ಬಹುದೊಡ್ಡ ಯಶಸ್ಸನ್ನು ಸಾಧಿಸಿದ್ದು ಉಗ್ರರ ವಿರುದ್ಧದ ಕಾರ್ಯಾಚರಣೆ ಮಾತ್ರ ಮುಂದುವರೆದಿದೆ ಎಂದು ಕಿರಣ್ ರಿಜಿಜು ಮಾಹಿತಿ ನೀಡಿದ್ದಾರೆ. ಭದ್ರತಾ ಪಡೆಗಳು ಮತ್ತು ಉಗ್ರಗಾಮಿಗಳ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ಕು ಮಂದಿ ಉಗ್ರರು ಹತರಾಗಿ ಒಬ್ಬನನ್ನು ಸೆರೆಹಿಡಿಯಲಾಗಿದೆ. ಇವರೆಲ್ಲರೂ ವಿದೇಶಿಯರು ಎಂದು ಭದ್ರತಾ ಪಡೆ ಅಧಿಕಾರಿಗಳು ತಿಳಿಸಿದ್ದಾರೆ.