

ಪುಣೆ: ಅಸಹಿಷ್ಣುತೆ ಕುರಿತಂತೆ ಬಾಲಿವುಡ್ ನಟ ಅಮೀರ್ ಖಾನ್ ನೀಡಿದ್ದ ವಿವಾದಾತ್ಮಕ ಹೇಳಿಕೆ ಇದೀಗ ಮತ್ತೆ ಜೀವ ಪಡೆದಿದ್ದು, ಕೇಂದ್ರ ಸಚಿವ ಮನೋಹರ್ ಪರಿಕ್ಕರ್ ಅವರು ಖಾನ್ ಹೇಳಿಕೆಯನ್ನು ಸೊಕ್ಕಿನ ನಡೆ ಎಂದು ಟೀಕಿಸಿದ್ದಾರೆ.
ಪುಣೆಯಲ್ಲಿ ನಡೆದ ಸಿಯಾಚಿನ್ ಕುರಿತ ಮಾರಾಠಿ ಪುಸ್ತಕವೊಂದರ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪರಿಕ್ಕರ್ ಅವರು, ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಈ ವೇಳೆ ಅಸಹಿಷ್ಟುತೆ ಕುರಿತಂತೆ ಅಮೀರ್ ಖಾನ್ ಹೇಳಿಕೆಯನ್ನು ಪ್ರಸ್ತಾಪಿಸಿದ ಮನೋಹರ್ ಪರಿಕ್ಕರ್ ಅವರು, ನಟನ ಹೇಳಿಕೆ ಸೊಕ್ಕಿನ ಮಾತು ಎಂದು ಹೇಳಿದರು. " ಆ ನಟ ಅಂದು ಸೊಕ್ಕಿನಿಂದ ಆ ಹೇಳಿಕೆ ನೀಡಿದ್ದಾರೆ. ಒಂದು ವೇಳೆ ನಾನು ಬಡವನಾಗಿದ್ದು, ಚಿಕ್ಕಮನೆಯಲ್ಲಿ ವಾಸವಾಗಿದ್ದರೆ, ದೊಡ್ಡ ಮನೆಯ ಕನಸಿನ ಹೊರತಾಗಿಯೂ ನನ್ನ ಮನೆಯನ್ನು ಪ್ರೀತಿಸುತ್ತೇನೆ ಎಂದು ಹೇಳಿದರು.
ಇನ್ನು ಅಮೀರ್ ಖಾನ್ ರ ಹೇಳಿಕೆಯನ್ನು ವಿರೋಧಿಸಿದ ಪರಿಕ್ಕರ್ ಅವರು, ಇಂತಹ ಮಂದಿಗೆ ದೇಶದ ವಿರುದ್ಧ ಮಾತನಾಡುವ ಹಕ್ಕು ಮತ್ತು ಧೈರ್ಯ ಹೇಗೆ ಬರುತ್ತದೆ ಎಂದು ತಿಳಿಯುತ್ತಿಲ್ಲ. ಇಂತಹವರಿಗೆ ದೇಶದ ಜನರೇ ಪಾಠ ಕಲಿಸಬೇಕು ಎಂದು ಅವರು ಹೇಳಿದರು.