

ಹೈದರಾಬಾದ್: ಗೋವಿನ ವಿಚಾರಕ್ಕೆ ಸಂಬಂಧಿಸಿದಂತೆ ಗುಜರಾತ್ ನಲ್ಲಿ ದಲಿತರ ಮೇಲೆ ಹಲ್ಲೆ ನಡೆದಿರುವ ಬೆನ್ನಲ್ಲೇ, ತೆಲಂಗಾಣದ ಬಿಜೆಪಿ ಶಾಸಕ ರಾಜಾ ಸಿಂಗ್ ಗೋ ರಕ್ಷಕರನ್ನು ಸಮರ್ಥಿಸಿಕೊಂಡಿದ್ದಾರೆ. ಗೋಮಾಂಸವನ್ನು ಸೇವಿಸುತ್ತಿರುವವರು ಇಡೀ ಸಮುದಾಯಕ್ಕೆ ಅಪಕೀರ್ತಿ ತರುತ್ತಿದ್ದು, ಅಂತಹವರಿಗೆ ಸರಿಯಾದ ಪಾಠ ಕಲಿಸಬೇಕೆಂದು ರಾಜಾ ಸಿಂಗ್ ಹೇಳಿದ್ದಾರೆ. ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ವಿಡಿಯೋ ಅಪ್ ಲೋಡ್ ಮಾಡಿದ್ದು, ಎಲ್ಲಾ ದಲಿತರನ್ನು ಈ ವಿಷಯಕ್ಕೆ ಎಳೆತಂದಿರುವ ಮಾಯಾವತಿ ಅವರ ನಡೆಯನ್ನು ಬಿಜೆಪಿ ಶಾಸಕ ರಾಜಾ ಸಿಂಗ್ ಖಂಡಿಸಿದ್ದಾರೆ.
ಗೋವನ್ನು ಹತ್ಯೆ ಮಾಡುವ ದಲಿತರಿಗೆ ಕೇಳುತ್ತಿದ್ದೇನೆ, ಗೋವನ್ನು ಹತ್ಯೆ ಮಾಡಿ ಅದರ ಮಾಂಸ ತಿನ್ನುವುದು ಅಗತ್ಯವಿದೆಯೇ? ಎಂದು ರಾಜಾ ಸಿಂಗ್ ಪ್ರಶ್ನಿಸಿದ್ದಾರೆ. ಒಂದು ವೇಳೆ ಹೌದೆನ್ನುವುದಾದರೆ ಇದು ತಪ್ಪು, ಇದರಿಂದಾಗಿ ಇಡೀ ದಲಿತ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ರಾಜಾ ಸಿಂಗ್ ಹೇಳಿದ್ದಾರೆ. ಗೋ ರಕ್ಷಣೆಯಲ್ಲಿ ಹಲವು ದಲಿತರು ಸಹ ಇದ್ದು ನಾನು ಗೋಹತ್ಯೆ ಮಾಡುವ ದಲಿತರಿಗೆ ಪಾಠ ಕಲಿಸುವುದನ್ನು ಬೆಂಬಲಿಸುತ್ತೇನೆ ಎಂದು ರಾಜಾ ಸಿಂಗ್ ಹೇಳಿದ್ದಾರೆ.