

ಬುರ್ದ್ವಾನ್: ಮಹಾರಾಷ್ಟ್ರದ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ವೊಂದು ಅಪಘಾತಕ್ಕೀಡಾಗಿದ್ದು, ಪರಿಣಾಮ 3 ಯಾತ್ರಾರ್ಥಿಗಳು ಸಾವನ್ನಪ್ಪಿ 17 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ಬುಧವಾರ ನಡೆದಿದೆ.
ಸಂಜಯ್ ದನ್ಖಾರ್ (42), ರಾಜ್ಮತಿ ಬಾಲ್ಸೆಟ್ಟಿ (65), ಅಜಯ್ ಸಾವನ್ನಪ್ಪಿರುವ ದುರ್ದೈವಿಗಳು. ಮಹಾರಾಷ್ಟ್ರದ ಲಾತೂರ್ ಮೂಲದ ಯಾತ್ರಾರ್ಥಿಗಳು 1 ತಿಂಗಳ ಹಿಂದೆ ಪ್ರವಾಸಕ್ಕೆಂದು ಬಂದಿದ್ದಾರೆ. ಇಂದು ಪ್ರವಾಸದ ಕಡೆಯ ದಿನವಾಗಿತ್ತು. ಇದರಂತೆ ಗಂಗಾಸಾಗರ್ ನಿಂದ ಲಾತುರ್ ಗೆ ಹೋಗುವ ವೇಳೆ ಬೆಳಿಗ್ಗೆ 10 ಗಂಟೆ ಸುಮಾರಿಗೆ ಟ್ರಕ್ ವೊಂದಕ್ಕೆ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ 3 ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗುತ್ತಿದೆ. ಚಿಕಿತ್ಸೆ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಪ್ರಸ್ತುತ ಟ್ರಕ್ ನನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಪೊಲೀಸರು ಹೇಳಿದ್ದಾರೆ.