

ನವದೆಹಲಿ: ದೆಹಲಿ ಮುನ್ಸಿಪಲ್ ಕೌನ್ಸಿಲರ್ ಎಮ್ ಎಮ್ ಖಾನ್ ಕೊಲೆ ಪ್ರಕರಣದಲ್ಲಿ ನಾನು ಭಾಗಿಯಾಗಿದ್ದೇನೆ ಎಂಬ ಆರೋಪವನ್ನು ಸಿಎಂ ಅರವಿಂದ್ ಕೇಜ್ರಿವಾಲ್ ಸೂಕ್ತ ಸಾಕ್ಷಿಗಳೊಂದಿಗೆ ಸಾಬೀತು ಪಡಿಸಲಿ ಎಂದು ಆಗ್ರಹಿಸಿ ಬಿಜೆಪಿ ಸಂಸದ ಮಹೇಶ್ ಗಿರ್ರಿ ಕೇಜ್ರಿವಾಲ್ ನಿವಾಸದ ಎದುರು ಕೈಗೊಂಡಿರುವ ಉಪವಾಸ ಸತ್ಯಾಗ್ರಹ ಎರಡನೇ ದಿನಕ್ಕೆ ಕಾಲಿಟ್ಟಿದೆ.
ತಮ್ಮ ಸಹೋದ್ಯೋಗಿ ವಿಜಯ್ ಗೋಯೆಲ್ ಅವರ ಜೊತೆ ಮಹೇಶ್ ಗಿರ್ರಿ ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.ಮಹೇಶ್ ಗಿರ್ರಿ ಅವರ ಪ್ರತಿಭಟನೆಗೆ ಬಿಜೆಪಿ ಹಿರಿಯ ಮುಖಂಡ ಸುಬ್ರಮಣಿಯನ್ ಸ್ವಾಮಿ ಸಾಥ್ ನೀಡಿದ್ದಾರೆ
ಮುಖ್ಯಮಂತ್ರಿ ಕೇಜ್ರಿವಾಲ್ ಅವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ತಮ್ಮ ಬಳಿ ಸೂಕ್ತ ಸಾಕ್ಷ್ಯಳಿದ್ದರೆ ಬಹಿರಂಗ ಚರ್ಚೆಗೆ ಬನ್ನಿ, ಅಪರಾಧ ಸಾಬೀತು ಪಡಿಸಲು ನಿಮ್ಮಿಂದ ಸಾಧ್ಯವಾಗದಿದ್ದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಒಂದು ವೇಳೆ ನಾನು ಅಪರಾಧಿ ಎಂದು ನೀವು ಸಾಬೀತು ಮಾಡಿದಲ್ಲಿ ರಾಜಕೀಯದಿಂದಲೇ ನಿವೃತ್ತಿ ಪಡೆಯುವುದಾಗಿ ಸವಾಲು ಹಾಕಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿರುವ ಪ್ರಧಾನಿ ಮೋದಿ ಅವರು ಪೊಲೀಸರ ಮೇಲೆ ಒತ್ತಡ ಹೇರಿ ಬಿಜೆಪಿ ಸಂಸದರನ್ನು ರಕ್ಷಿಸುತ್ತಿದ್ದಾರೆ. ಪ್ರಕರಣದಲ್ಲಿ ಗಿರ್ರಿ ಆರೋಪಿ ಆಗಿದ್ದು, ಈ ಕೂಡಲೇ ಅವರನ್ನು ಬಂಧಿಸಬೇಕು ಎಂದು ಭಾನುವಾರ ಅರವಿಂದ್ ಕೇಜ್ರಿವಾಲ್ ಹೇಳಿದ್ದರು.
ದೆಹಲಿ ಮಾಜಿ ಮುನ್ಸಿಪಲ್ ಕೌನ್ಸಿಲರ್ ಎಮ್ ಎಮ್ ಖಾನ್ ಖಾನ್ ಅವರನ್ನು ಮೇ 16ರಂದು ಜಾಮೀಯಾ ನಗರದಲ್ಲಿ ಗುಂಡಿಟ್ಟು ಕೊಲ್ಲಲಾಗಿತ್ತು.