
ನವದೆಹಲಿ: ರಸ್ತೆಗಳಲ್ಲಿ ಅಪಘಾತವಾದರೆ ಎಲ್ಲಿ ನಮ್ಮ ವಿರುದ್ಧ ಕೇಸ್ ದಾಖಲಾಗುತ್ತದೆಯೋ, ಎಲ್ಲಿ ಕೋರ್ಟ್, ಕಚೇರಿ ಎಂದು ತಿರುಗಾಡುವ ಪ್ರಸಂಗಗಳು ಎದುರಾಗುತ್ತವೆಯೋ ಎಂದು ಎಷ್ಟೋ ಮಂದಿ ಸಂತ್ರಸ್ತರ ನೆರವಿಗೆ ಹೋಗದೇ ಇರುವುದನ್ನು ಪ್ರತೀ ನಿತ್ಯ ನೋಡುತ್ತಿರುತ್ತೇವೆ. ಎಷ್ಟೋ ಬಾರಿ ನಮ್ಮ ಕಣ್ಣೆದುರಿಗೆ ಅಪಘಾತವಾಗಿ ಹೋಗಿದ್ದರು ಸಹಾಯ ಮಾಡಲಿಲ್ಲ ಎಂಬ ತಪ್ಪಿನ ಭಾವನೆಗಳು ಕಾಡುತ್ತಿರುತ್ತಿರುತ್ತವೆ.
ಇಂತಹ ಸಮಸ್ಯೆಗಳ ನೆರವಿಗೆ ಧಾವಿಸಿರುವ ಸುಪ್ರೀಂಕೋರ್ಟ್ ಇದೀಗ ಸಂತ್ರಸ್ತರಿಗೆ ನೆರವಾಗುವ ಆಪತ್ಭಾಂದವರಿಗೆ ಬೆಂಬಲ ಸೂಚಿಸಿ ಹೊಸ ನಿಯಮಾವಳಿಗಳನ್ನು ಪ್ರಕಟಿಸಿದ್ದು, ಆ ನಿಯಮಾವಳಿಗಳನ್ನು 30 ದಿನಗಳೊಳಗಾಗಿ ಜಾರಿಗೆ ತರುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಇನ್ನು ಮುಂದೆ ಅಪಘಾತಗಳು ಸಂಭವಿಸಿದಾಗ ಯಾರು ಬೇಕಾದರು ಭಯವಿಲ್ಲದೆಯೇ ಸಂತ್ರಸ್ತರಿಗೆ ನೆರವಾಗಬಹುದು.
ಇದೀಗ ಸುಪ್ರೀಂ ಹೊರಡಿಸಿರುವ ಹೊಸ ನಿಯಮಾವಳಿಯ ಪ್ರಕಾರ ಅಪಘಾತ ಸಂಭವಿಸಿದ ನಂತರ ಸಂತ್ರಸ್ತನ ನೆರವಿಗೆ ಬರುವ ವ್ಯಕ್ತಿಯನ್ನು ಪೊಲೀಸರು ಹೆಸರು ಮತ್ತು ಸಂಪರ್ಕ ಕುರಿತ ಮಾಹಿತಿಯನ್ನು ಬಹಿರಂಗಗೊಳಿಸುವಂತೆ ಬಲವಂತೆ ಮಾಡುವಂತಿಲ್ಲ. ಒಂದು ವೇಳೆ ಸ್ವಯಂಪ್ರೇರಿತರಾಗಿ ಹೆಸರು ಮತ್ತು ಸಂಪರ್ಕ ಮಾಹಿತಿಯನ್ನು ಪೊಲೀಸರಿಗೆ ನೀಡಿದರೆ, ಪೊಲೀಸರು ಒಂದೇ ಬಾರಿಗೆ ವಿಚಾರಣೆ ಪ್ರಕ್ರಿಯೆನ್ನು ಮುಗಿಸಬೇಕು. ವ್ಯಕ್ತಿಯನ್ನು ಪದೇಪದೇ ನ್ಯಾಯಾಲಯ, ಪೊಲೀಸ್ ಠಾಣೆಯೆಂದು ಅಲೆಸುವಂತಿಲ್ಲ ಎಂದು ಹೇಳಿದೆ, ಇದಲ್ಲದೆ, ಒಂದು ವೇಳೆ ಆ ವ್ಯಕ್ತಿ ವಿಚಾರಣೆಗೆ ಹಾಜರಾಗಲು ಸಾಧ್ಯವಾಗದೇ ಇದ್ದ ಪಕ್ಷದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಬಹುದು. ಇದಕ್ಕೆ ಅಧಿಕಾರಿಗಳು ಸೌಲಭ್ಯವನ್ನು ಕಲ್ಪಸಬೇಕು ಎಂದು ಹೇಳಿದೆ.
ಇದರಂತೆ ಗಾಯಾಳುವಿಗೆ ಚಿಕಿತ್ಸೆ ನೀಡುವ ಆಸ್ಪತ್ರೆ ಹಾಗೂ ವೈದ್ಯರಿಗೂ ಹೊಸ ನಿಯಮಾವಳಿಯನ್ನು ಹೊರಡಿಸಿರುವ ಸುಪ್ರೀಂ, ಅಪಘಾತಕ್ಕೊಳಗಾಗಿ ಆಸ್ಪತ್ರೆಗೆ ಬರುವ ಸಂತ್ರಸ್ತರಿಗೆ ಚಿಕಿತ್ಸೆ ನೀಡಲು ಯಾವುದೇ ವೈದ್ಯರು ನಿರಾಕರಿಸಿದರೂ, ಅವರ ವಿರುದ್ಧ ಕರ್ತವ್ಯ ಲೋಪ ಆರೋಪ ಹೊರಿಸಲಾಗುತ್ತದೆ. ಗಾಯಾಳುಗಳನ್ನು ಆಸ್ಪತ್ರೆಗೆ ಕರೆತರುವ ವ್ಯಕ್ತಿಯನ್ನು ಬಂಧನಕ್ಕೊಳಪಡಿಸುವಂತಿಲ್ಲ. ಅಥವಾ ಚಿಕಿತ್ಸೆಗಾಗಿ ಹಣವನ್ನು ಹೂಡಿಕೆ ಮಾಡುವಂತೆ ಕೇಳುವಂತಿಲ್ಲ. ಎಲ್ಲಾ ಆಸ್ಪತ್ರೆಗಳೂ ಆಂಗ್ಲ ಹಾಗೂ ಸ್ಥಳೀಯ ಭಾಷೆಗಳಲ್ಲಿ ದೊಡ್ಡದಾಗಿ ಈ ಮಾಹಿತಿಯನ್ನು ಪ್ರದರ್ಶಿಸಬೇಕು. ಒಂದು ವೇಳೆ ಆಸ್ಪತ್ರೆಗಳು ನಿಯಮ ಪಾಲಿಸದಿದ್ದ ಪಕ್ಷದಲ್ಲಿ ಆಯಾ ರಾಜ್ಯ ಸರ್ಕಾರಗಳು ಆಸ್ಪತ್ರೆಗಳಿಗೆ ದಂಡ ವಿಧಿಸಬೇಕು ಎಂದು ಸುಪ್ರೀಂ ಹೇಳಿದೆ.
Advertisement