

ನವದೆಹಲಿ: ಸಾಲದ ಸುಳಿಯಲ್ಲಿ ಸಿಲುಕಿಕೊಂಡಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರು ಭಾರತವನ್ನು ತೊರೆದು ವಿದೇಶಕ್ಕೆ ಹಾರಿದ್ದಾರೆಂಬ ಸ್ಪೋಟಕ ಮಾಹಿತಿಯೊಂದು ಹೊರ ಬಂದಿದೆ.
ಈ ಕುರಿತಂತೆ ಸರ್ಕಾರಿ ನ್ಯಾಯಮೂರ್ತಿ ಮುಕುಲ್ ರೊಹ್ಟಗಿ ಮಾಹಿತಿ ನೀಡಿದ್ದು, ಮಾರ್ಚ್ 2 ರಂದು ಮಲ್ಯ ಅವರು ಭಾರತ ತೊರೆದು ವಿದೇಶಕ್ಕೆ ಹಾರಿದ್ದಾರೆಂದು ಕೇಂದ್ರ ಗುಪ್ತಚರ ಇಲಾಖೆ ಸಿಬಿಐ ಸುಪ್ರೀಂಕೋರ್ಟ್ ಗೆ ಮಾಹಿತಿ ನೀಡಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಮಲ್ಯ ಅವರು ಲಂಡನ್ ನಲ್ಲಿರುವ ತಮ್ಮ ಮಕ್ಕಳ ಸಹಾಯದಿಂದ ಭಾರತ ತೊರೆದಿರಬಹುದು ಎಂದು ಹೇಳಲಾಗುತ್ತಿದ್ದು, ಈ ಸಂಬಂಧಿಸಿ ಇಲ್ಲಿಯವರೆಗೆ ಯಾವುದೇ ಸ್ಪಷ್ಟ ಮಾಹಿತಿಗಳು ಲಭ್ಯವಾಗಿಲ್ಲ.
ಮಲ್ಯ ಅವರು ದೇಶದಲ್ಲಿ ಇಲ್ಲ ಎಂಬುದು ನಮ್ಮ ಅರಿವಿಗೆ ಬಂದಿದೆ. ಅಗತ್ಯ ಬಿದ್ದರೆ ಅವರನ್ನು ಹುಡುಕುವ ಪ್ರಯತ್ನವನ್ನು ಅಧಿಕಾರಿಗಳು ಮಾಡುತ್ತಾರೆಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಳೆದೆರಡು ದಿನಗಳ ಹಿಂದಷ್ಟೇ ಸಾರ್ವಜನಿಕ ವಲಯದ ಬ್ಯಾಂಕುಗಳು ಮಲ್ಯ ಅವರು ಭಾರತ ಬಿಟ್ಟು ಹೋಗದಂತೆ ತಡೆಯಲು ಸುಪ್ರೀಂನಲ್ಲಿ ಅರ್ಜಿಯೊಂದನ್ನು ದಾಖಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸುವುದಾಗಿ ತಿಳಿಸಿದ್ದ ನ್ಯಾಯಾಲಯವು ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಮಲ್ಯ ಅವರಿಗೆ ನೋಟಿಸ್ ಜಾರಿ ಮಾಡಿತ್ತು.