ಹೈದ್ರಾಬಾದ್: ಆನ್‌ಲೈನ್ ಶಾಪಿಂಗ್ ಕಂಪನಿಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಮೂಲಕ ವಸ್ತುಗಳನ್ನು ಆರ್ಡರ್ ಮಾಡಿ ಮೋಸ ಮಾಡಿದ ಇಬ್ಬರು ಸಹೋದರರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಾದ ಯಾಹಿಯಾ ಮೋಹದ್ ಇಶಾಖ್ ಮತ್ತು ಮೋಹದ್ ಶಹ್‌ರೋಸ್ ಅನ್ಸಾರಿ ಹೈದ್ರಾಬಾದ್ ನಿವಾಸಿಗಳಾಗಿದ್ದಾರೆ.
ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಮೂಲಕ ಇವರು ವಸ್ತುಗಳನ್ನು ಆರ್ಡರ್ ಮಾಡುತ್ತಾರೆ. ಆ ವಸ್ತುವನ್ನು ಡೆಲಿವರಿ ಮಾಡಲು ಬರುವ ವ್ಯಕ್ತಿಯೊಂದಿಗೆ ಇದರಲ್ಲಿದ್ದ ಒಬ್ಬ ವ್ಯಕ್ತಿ ಮಾತನಾಡುತ್ತಾನೆ. ಇನ್ನೊಬ್ಬ ಆ ವಸ್ತುವನ್ನು ತೆಗೆದುಕೊಂಡು ಮನೆಯೊಳಗೆ ಹೋಗುತ್ತಾನೆ. ಇದಾದನಂತರ ಆ ವಸ್ತುವನ್ನು ತೆಗೆದು ಅದರ ಪೆಟ್ಟಿಗೆಯೊಳಗೆ ಕಲ್ಲು ಮಣ್ಣು ತುಂಬಿಸಿ ಇಡುತ್ತಾರೆ. ಆಮೇಲೆ ಡೆಬಿಟ್ ಕಾರ್ಡ್‌ನಲ್ಲಿ ದುಡ್ಡಿಲ್ಲ ಎಂದು ಹೇಳಿ ಆ ವಸ್ತುವನ್ನು ವಾಪಸ್ ಮಾಡುತ್ತಾರೆ.
ಈ ರೀತಿಯಲ್ಲಿ ಬೆಲೆಬಾಳುವ ಮೊಬೈಲ್ ಫೋನ್, ಲ್ಯಾಪ್‌ಟಾಪ್, ಕ್ಯಾಮೆರಾ, ಡಿವಿಡಿ ಪ್ಲೇಯರ್ ಮೊದಲಾದವುಗಳನ್ನು ಇವರು ಮೋಸದಾಟದಿಂದ ಗಿಟ್ಟಿಸಿಕೊಂಡಿದ್ದಾರೆ. ನಾಲ್ಕು ತಿಂಗಳಿನಿಂದ ಇವರು ಈ ರೀತಿ ಮೋಸದಾಟ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.