ಉಗ್ರರ ಸಣ್ಣ ಕೃತ್ಯಗಳನ್ನು ಸಹ ಯುದ್ಧವೆಂದೇ ಪರಿಗಣಿಸಬೇಕು: ಮನೋಹರ್ ಪರ್ರಿಕರ್

ಉಗ್ರಗಾಮಿಗಳ ಸಣ್ಣ ದಾಳಿಗಳನ್ನು ಕೂಡ ಯುದ್ಧವೆಂದು ಪರಿಗಣಿಸಬೇಕು. ಪಾಕಿಸ್ಥಾನದ ಜತೆಗೆ ಸೌಹಾರ್ದಯುತ ಸಂಬಂಧ...
ಮನೋಹರ್ ಪರ್ರಿಕರ್
ಮನೋಹರ್ ಪರ್ರಿಕರ್
Updated on: 

ನವದೆಹಲಿ: ಉಗ್ರಗಾಮಿಗಳ ಸಣ್ಣ  ದಾಳಿಗಳನ್ನು ಕೂಡ ಯುದ್ಧವೆಂದು ಪರಿಗಣಿಸಬೇಕು. ಪಾಕಿಸ್ಥಾನದ ಜತೆಗೆ ಸೌಹಾರ್ದಯುತ ಸಂಬಂಧ ಹೊಂದಿರಬೇಕು. ಹಾಗೆಂದು ನಮಗೆ ಹಾನಿ ಉಂಟುಮಾಡಿರುವ ಅಲ್ಲಿನ ಕೆಲವು ಉಗ್ರ ಸಂಘಟನೆಗಳನ್ನು ಸುಮ್ಮನೆ ಬಿಡಬಾರದು; ಸೇನಾ ಕಾರ್ಯಾಚರಣೆ ಮೂಲಕ ತಕ್ಕ ಪಾಠ ಕಲಿಸಬೇಕು ಎಂದು ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ಹೇಳಿದ್ದಾರೆ.

ಅವರು ನಿನ್ನೆ ಲೋಕಸಭೆಯಲ್ಲಿ ಚರ್ಚೆಯೊಂದರ ಮೇಲೆ ಮಾತನಾಡಿ, ನಮ್ಮ ದೇಶದ ಯಾವುದೇ ಭಾಗದಲ್ಲಿ ಭಯೋತ್ಪಾದಕರು ಕುಕೃತ್ಯವೆಸಗಿದರೆ ಅದನ್ನು ಯುದ್ಧವೆಂದು ಭಾವಿಸಬೇಕು. ಸುಮ್ಮನೆ ವಾಹಿನಿಗಳಲ್ಲಿ ಟೀಕೆ, ಅಭಪ್ರಾಯ ಹೇಳಿಕೊಂಡು ಕುಳಿತುಕೊಂಡರೆ ಸಾಲದು. ಇದರಿಂದ ರಕ್ಷಣಾ ಪಡೆಗಳು ಅಪಾಯವನ್ನು ಎದುರಿಸುತ್ತವೆ ಎಂದು ಹೇಳಿದರು.

"ಪಾಕ್‌ ಜತೆಗೆ ನಮಗೆ ಉತ್ತಮ ಸಂಬಂಧಗಳು ಬೇಕು ನಿಜ; ಆದರೆ ನಮ್ಮ ಗೌರವ, ಘನತೆ ಮತ್ತು ಸ್ವಾಭಿಮಾನವನ್ನು ಬಲಿಕೊಟ್ಟು ಅಲ್ಲ; ನಮ್ಮ ಮೇಲೆ ದಾಳಿ ಮಾಡಿರುವ ನಮ್ಮ ಶತ್ರುಗಳಿಗೆ ನಾವು ಸರಿಯಾದ ಪಾಠವನ್ನು ಕಲಿಸಬೇಕಾಗಿದೆ; ಅವರನ್ನು ಹಾಗೆಯೇ ಬಿಡಲು ಸಾಧ್ಯವಿಲ್ಲ; ನಮ್ಮ ವಿರುದ್ಧ ನಡೆಯವ ಎಷ್ಟೇ ಸಣ್ಣ ಭಯೋತ್ಪಾದಕ ಕೃತ್ಯವನ್ನು ಕೂಡ ನಾವು ನಮ್ಮ ವಿರುದ್ಧದ ಯುದ್ಧವೆಂದೇ ಪರಿಗಣಿಸುತ್ತೇವೆ' ಎಂದು ಹೇಳಿದರು.

ಪಠಾಣ್ ಕೋಟ್ ವಾಯುನೆಲೆಯ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಆರು ಮಂದಿ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಈ ಘಟನೆ ಕುರಿತಂತೆ ತಾವು ಅವಧಿಗಿಂತ ಮೊದಲೇ ಹೇಳಿಕೆ ನೀಡಿರಲಿಲ್ಲ ಎಂದರು.

ಪ್ರಧಾನಿ, ಗೃಹ ಸಚಿವರು ಮತ್ತು ರಕ್ಷಣಾ ಸಚಿವರು ಪಠಾಣ್ ಕೋಟ್ ಮೇಲೆ ನಡೆದ ಉಗ್ರರ ದಾಳಿಯ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಿಲ್ಲ ಎಂದು ವಿರೋಧಪಕ್ಷದ ಸಂಸದರು ಮಾಡಿರುವ ಟೀಕೆಗೆ ಅವರು ಪ್ರತಿಕ್ರಿಯಿಸಿದರು.

ಪಠಾಣ್‌ಕೋಟ್‌ ವಾಯು ನೆಲೆಯ ಮೇಲೆ ದಾಳಿ ನಡೆಸಿದ ಉಗ್ರರ ವಿರುದ್ಧ ನಾವು ಮ್ಯಾನ್‌ಮಾರ್‌ನಲ್ಲಿ ನಡೆಸಿದ ರೀತಿಯ ಸೇನಾ ಕಾರ್ಯಾಚರಣೆಯನ್ನು ನಡೆಸಿ ತಕ್ಕುದಾದ ಪಾಠ ಕಲಿಸಬೇಕಾಗಿದೆ; ನಮಗೆ ನೋವುಂಟು ಮಾಡಿದ ಪಾಕ್‌ ಮೂಲದ ಉಗ್ರರನ್ನು ನಾವು ಸುಮ್ಮನೆ ಬಿಡಲು ಸಾಧ್ಯವಿಲ್ಲ ಎಂದು ಪರ್ರಿಕರ್‌ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com