

ಡೆಹ್ರಾಡೂನ್: ನಾಟಕೀಯ ಬೆಳವಣಿಗೆಯೊಂದರಲ್ಲಿ ಉತ್ತರಾಖಂಡದಲ್ಲಿ ರಾಜಕೀಯ ಅಸ್ಥಿರತೆ ಕಂಡು ಬಂದಿದ್ದು, ಆಡಳಿತಾರೂಢ ಕಾಂಗ್ರೆಸ್ನ 12 ಶಾಸಕರು ಬಂಡಾಯವೆದ್ದಿದ್ದಾರೆ. ಪರಿಣಾಮ ಹರೀಶ್ ರಾವತ್ ನೇತೃತ್ವದ ಸರ್ಕಾರ ಪತನದ ಭೀತಿಗೆ ಸಿಲುಕಿದೆ.
ವಿಧಾನಸಭೆ ಅಧಿವೇಶನದಲ್ಲಿ ಶುಕ್ರವಾರ ಹಣಕಾಸು ಮಸೂದೆಯೊಂದಕ್ಕೆ ಒಪ್ಪಿಗೆ ಸೂಚಿಸುವ ಸಂದರ್ಭದಲ್ಲಿ ಕಾಂಗ್ರೆಸ್ನ 12 ಶಾಸಕರು ಮತದಾನಕ್ಕೆ ನಿರಾಕರಿಸಿ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದರು. ಈ ಬಂಡಾಯ ಶಾಸಕರು ಈಗ ಬಿಜೆಪಿ ಜತೆ ಸೇರಿ ಸರ್ಕಾರ ರಚನೆಗೆ ಮುಂದಾಗಿದ್ದಾರೆನ್ನಲಾಗಿದೆ.
ಜತೆಗೆ ಬಿಜೆಪಿ ರಾಜ್ಯಾಧ್ಯಕ್ಷ ಅಜಯ್ ಭಟ್ ಅವರೊಂದಿಗೆ ರಾಜ್ಯಪಾಲ ಕೆ.ಕೆ. ಪಾಲ್ ಅವರನ್ನು ಭೇಟಿಯಾಗಿ ಹೊಸ ಸರ್ಕಾರ ರಚನೆ ಕುರಿತು ಮಾತುಕತೆ ನಡೆಸಿದ್ದಾರೆನ್ನಲಾಗಿದೆ. 70 ಸದಸ್ಯ ಬಲದ ಉತ್ತರಾಖಂಡ ವಿಧಾನಸಭೆಯಲ್ಲಿ ಕಾಂಗ್ರೆಸ್ 36, ಬಿಜೆಪಿ 28 ಶಾಸಕರನ್ನು ಹೊಂದಿದೆ. ಪಿಡಿಎಫ್ ಮೈತ್ರಿಕೂಟ 6 ಸದಸ್ಯರನ್ನು ಹೊಂದಿದೆ.