

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಬುಧವಾರ ಪಾಕಿಸ್ತಾನ ದಿನದ ಅಂಗವಾಗಿ ಆ ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ.
ಇಂದು ಟ್ವೀಟ್ ಮಾಡಿರುವ ಪ್ರಧಾನಿ '' ಪಾಕಿಸ್ತಾನ ದಿನದ ಅಂಗವಾಗಿ ಆ ದೇಶದ ಜನತೆಗೆ ಶುಭಾಶಯಗಳು' ಎಂದು ಹೇಳಿದ್ದಾರೆ.
ಪಾಕಿಸ್ತಾನ ದಿನದ ಅಂಗವಾಗಿ ದೆಹಲಿಯಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇಂದು ಸಂಜೆ ನಡೆಯುವ ಔತಣಕೂಟದಲ್ಲಿ ಕಾಶ್ಮೀರ ಪ್ರತ್ಯೇಕತಾವಾದಿ ಮುಖಂಡರು ಭಾಗವಹಿಸಲಿದ್ದಾರೆ.
ಭಾರತ ಸರ್ಕಾರದ ಪರವಾಗಿ ಹಿರಿಯ ಸಚಿವರೊಬ್ಬರು ಭಾಗವಹಿಸಲಿದ್ದಾರೆ ಎಂದು ವಿದೇಶಾಂಗ ಇಲಾಖೆ ವಕ್ತಾರ ವಿಕಾಸ್ ಸ್ವರೂಪ್ ತಿಳಿಸಿದ್ದಾರೆ.
ಪಾಕಿಸ್ತಾನ ದಿನದ ಅಂಗವಾಗಿ ನಿನ್ನೆ ಶುಭಕೋರಿದ್ದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪಾಕಿಸ್ತಾನದ ಜೊತೆ ಶಾಂತಿಯುತ, ಸ್ನೇಹಬದ್ಧ ಮತ್ತು ಸಹಕಾರದ ಸಂಬಂಧವನ್ನು ಹೊಂದಲು ಭಾರತ ಬದ್ಧವಾಗಿದೆ. ನಮ್ಮ ಸಹಕಾರವು ಎರಡೂ ದೇಶಗಳ ಮಧ್ಯೆ ಅಧಿವೃದ್ಧಿ ಮತ್ತು ಸಮೃದ್ಧಿಯನ್ನು ಕೊಂಡೊಯ್ಯಲಿದೆ ಎಂಬ ದೃಢ ನಂಬಿಕೆ ನನಗಿದೆ. ಪಾಕಿಸ್ತಾನ ಜನತೆ ಸುಖ, ಶಾಂತಿ, ಆರೋಗ್ಯದಿಂದ ಜೀವಿಸಲಿ ಎಂದು ಆಶಿಸುತ್ತೇನೆ ಎಂದು ತಮ್ಮ ಸಂದೇಶದಲ್ಲಿ ಹೇಳಿದ್ದರು.
ಏನಿದು ಪಾಕಿಸ್ತಾನ ದಿವಸ: ಲಾಹೋರ್ ನಿರ್ಣಯವನ್ನು ಮತ್ತು ಪಾಕಿಸ್ತಾನದ ಮೊದಲ ಸಂವಿಧಾನವನ್ನು ಜಾರಿಗೆ ತಂದ ದಿನವನ್ನು ಪಾಕಿಸ್ತಾನ ದಿನವೆಂದು ಆಚರಿಸುತ್ತಾರೆ. ನೆನಪಿಸಲು ಪ್ರತಿವರ್ಷ ಮಾರ್ಚ್ 23ನ್ನು ಪಾಕಿಸ್ತಾನ ದಿನವೆಂದು ಈ ದಿನ ಸಾರ್ವಜನಿಕ ರಜೆಯಿರುತ್ತದೆ. ಸ್ವತಂತ್ರ ಪಾಕಿಸ್ತಾನಕ್ಕಾಗಿ ಮುಸಲ್ಮಾನರು ಹೋರಾಟ ನಡೆಸಿದ ಘಟನೆಗಳ ಮುಖ್ಯ ಘಟ್ಟವೆಂದೇ ಲಾಹೋರ್ ನಿರ್ಣಯವನ್ನು ಪರಿಗಣಿಸಲಾಗುತ್ತದೆ. ಲಾಹೋರ್ ನಿರ್ಣಯವಾಗಿದ್ದು 1940ರಲ್ಲಿ. ಭಾರತದಲ್ಲಿ ಗಣರಾಜ್ಯೋತ್ಸವವನ್ನು ಆಚರಿಸುವಂತೆ ಪಾಕಿಸ್ತಾನದಲ್ಲಿ ಲಾಹೋರ್ ದಿನವನ್ನು ಆಚರಿಸಲಾಗುತ್ತದೆ.