

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೋಮವಾರ ಉಷ್ಣಾಂಶ ತೀವ್ರ ಮಟ್ಟಕ್ಕೆ ಏರಿಕೆಯಾಗಿದೆ. ಸೋಮವಾರ ವರ್ಷದ ಅತ್ಯಂತ ಉಷ್ಣಾಂಶ ದಿನವಾಗಿ ನಮೂದಾಗಿದ್ದು, ಇನ್ನು ಬಿಸಿಲಿನ ಝಳಕ್ಕೆ ದೆಹಲಿ ಜನತೆ ತತ್ತರಿಸಿದ್ದಾರೆ.
ಹೌದು ದೆಹಲಿಯಲ್ಲಿ ಪ್ರಸಕ್ತ ವರ್ಷದಲ್ಲಿ ಉಷ್ಣಾಂಶ 44 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಭಾನುವಾರ 42 ಡಿಗ್ರಿ ಸೆಲ್ಸಿಯನ್ ದಾಖಲಾಗಿದ್ದು, ಸೋಮವಾರ 44 ಡಿಗ್ರಿ ಸೆಲ್ಸಿಯಸ್ ಗೆ ಏರಿಕೆಯಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿಯಲ್ಲಿ ಕನಿಷ್ಠ ಉಷ್ಣಾಂಶ 23.8 ಡ್ರಿಗಿ ಸೆಲ್ಸಿಯಸ್ ಇದ್ದು, ಸೋಮವಾರದ ಉಷ್ಣಾಂಶ ಎರಡು ಪಟ್ಟು ಜಾಸ್ತಿಯಾಗಿದೆ. ಉಷ್ಣ ಹವೆ ಬೀಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಪ್ರಸಕ್ತ ವರ್ಷದಲ್ಲಿ ಭಾನುವಾರ ರಾಜಸ್ಥಾನದ ಜೋಧಪುರದ ಪಾಲೋಡಿ ನಗರದಲ್ಲಿ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಪಾಲೋಡಿಯಲ್ಲಿ 46.5 ಡಿಗ್ರಿ, ಶ್ರೀಗಂಗಾನಗರ(46.3), ಚುರು(46), ಬಿಕನೇರ್(45.8), ಬರ್ಮೇರ(45.2) ಮತ್ತು ಜೈಪುರ(43.3)ರಷ್ಟು ದಾಖಲಾಗಿದೆ.