

ನವದೆಹಲಿ: ರಾಷ್ಟ್ರಪತಿ ಆಡಳಿತ ಜಾರಿಯಲ್ಲಿರುವ ಉತ್ತರಾಖಂಡ್ ವಿಧಾನಸಭೆಯಲ್ಲಿ ಬಹುಮತ ಸಾಬೀತಿಗೆ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದ್ದು ಮೇ.10 ರಂದು ಬಹುಮತ ಸಾಬೀತು ಪ್ರಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ.
ಉತ್ತರಾಖಂಡ್ ರಾಷ್ಟ್ರಪತಿ ಆಡಳಿತದ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ನಡೆದ ವಿಚಾರಣೆ ವೇಳೆ ಕೇಂದ್ರದ ಪರವಾಗಿ ಹಾಜರಿದ್ದ ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ, ಉತ್ತರಾಖಂಡ್ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ವೀಕ್ಷಕರನ್ನು ನೇಮಕ ಮಾಡುವಂತೆ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿದ್ದಾರೆ.
ಬಹುಮತ ಸಾಬೀತು ಪ್ರಕ್ರಿಯೆಯಲ್ಲಿ ವೀಕ್ಷಕರಾಗಿ ನೇಮಕಗೊಳ್ಳುವವರು, ನಿವೃತ್ತ ಚುನಾವಣಾ ಆಯುಕ್ತರಾಗಿರಬೇಕೆಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿದ್ದು, ವಿಧಾನಸಭೆಯಲ್ಲಿ ಎರಡು ರಾಜಕೀಯ ಮೈತ್ರಿಗಳ ನಡುವಿನ ಸಾಮರ್ಥ್ಯ ಪರೀಕ್ಷೆಯಾಗಿರಬೇಕು ಎಂದು ಹೇಳಿದ್ದಾರೆ.
ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಅನರ್ಹಗೊಂಡ ಕಾಂಗ್ರೆಸ್ ನ 9 ಶಾಸಕರು ಮತ ಚಲಾಯಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ್ದು, ನಿರ್ದೇಶನದಂತೆ ಬಹುಮತ ಪರೀಕ್ಷೆ ನಡೆಯಲಿದೆ.