

ಚೆನ್ನೈ: ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ತಮಿಳುನಾಡಿನಲ್ಲಿ ಶನಿವಾರ ಚುನಾವಣಾ ಆಯೋಗ ಜಪ್ತಿ ಮಾಡಿದ್ದ 570 ಕೋಟಿ ಹಣ ನಮದೇ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ನಿನ್ನೆ ಚುನಾವಣಾ ಆಯೋಗ ಜಪ್ತಿ ಮಾಡಿದ್ದ ಹಣ ವಿಚಾರವಾಗಿ ಇಂದು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಎಸ್ ಬಿಐ ಅಧಿಕಾರಿಗಳು, "ಭಾರತೀಯ ರಿಸರ್ವ್ ಬ್ಯಾಂಕ್ ಅನುಮತಿ ಮೇರೆಗೆ ಹಣವನ್ನು ಕೊಯಮತ್ತೂರಿನ ಮುಖ್ಯ ಕಚೇರಿಯಿಂದ ವಿಶಾಖಪಟ್ಟಣದ ಇನ್ನೊಂದು ಶಾಖೆಗೆ ವರ್ಗಾವಣೆ ಮಾಡಲಾಗುತ್ತಿತ್ತು. ಆದರೆ ಈ ಹಣವನ್ನು ಜಪ್ತಿ ಮಾಡಿದ್ದು ಚುನಾವಣಾ ಆಯೋಗದ ತಪ್ಪು. ಆಂಧ್ರಪ್ರದೇಶದಲ್ಲಿನ ತಾತ್ಕಾಲಿಕ ನಗದು ಕೊರತೆಯನ್ನು ನೀಗಿಸಲು ಕೊಯಮತ್ತೂರಿನ ನಮ್ಮ ಮುಖ್ಯ ಕಚೇರಿಯಿಂದ ವಿಶಾಖಪಟ್ಟಣದ ವಿಶೇಷ ಆಡಳಿತ ಶಾಖೆಗೆ ಒಯ್ಯಲಾಗುತ್ತಿತ್ತು ಎಂದು ತಮ್ಮ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಚುನಾವಣಾ ಪ್ರಕ್ರಿಯೆ ಜಾರಿಯಲ್ಲಿರುವ ತಮಿಳುನಾಡಿನಲ್ಲಿ ಶನಿವಾರ ಚುನಾವಣಾ ಅಧಿಕಾರಿಗಳು 3 ಟ್ರಕ್ ಗಳಲ್ಲಿ ಸಾಗಿಸಲಾಗುತ್ತಿದ್ದ ಬರೊಬ್ಬರಿ 570 ಕೋಟಿ ಹಣವನ್ನು ಜಪ್ತಿ ಮಾಡಿದ್ದರು. ಈ ಹಣವನ್ನು ಮತದಾರರಿಗೆ ಹಂಚಲು ತೆಗೆದುಕೊಂಡು ಹೋಗಲಾಗುತ್ತಿತ್ತು ಎಂದು ಹೇಳಲಾಗುತ್ತಿತ್ತಾದರೂ, ಎಸ್ ಬಿಐ ಬ್ಯಾಂಕ್ ಅಧಿಕಾರಿಗಳು ಸೂಕ್ತ ದಾಖಲೆ ನೀಡಿದ ಹಿನ್ನಲೆಯಲ್ಲಿ ಇಂದು ಹಣವನ್ನು ವಾಪಸ್ ನೀಡಲಾಗಿದೆ ಎಂದು ತಿಳಿದುಬಂದಿದೆ.