

ಚೆನ್ನೈ: ತೀವ್ರ ಕುತೂಹಲ ಕೆರಳಿಸಿರುವ ಮೂರು ರಾಜ್ಯಗಳ ವಿಧಾನಸಭಾ ಚುನಾವಣಾ ಮತದಾನ ಪ್ರಕ್ರಿಯೆ ಬಿರುಸಿನಿಂದ ಸಾಗಿದ್ದು, ತಮಿಳುನಾಡಿನಲ್ಲಿ 11ಗಂಟೆಯ ವೇಳೆ ಶೇ.25.2ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ.
ಸೋಮವಾರ ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಸರತಿ ಸಾಲಲ್ಲಿ ನಿಂತು ಮತದಾರರು ಮತದಾನ ಮಾಡುತ್ತಿದ್ದಾರೆ. ಇನ್ನು ತಮಿಳುನಾಡಿನಾದ್ಯಂತ ಬೆಳಗ್ಗೆ ಸುರಿದ ಭಾರಿ ಮಳೆ ಮತದಾನಕ್ಕೆ ಅಡ್ಡಿ ಪಡಿಸಿತ್ತು. ಆದರೂ ಕೊಡೆ ಹಿಡಿದೇ ಮತದಾನಕ್ಕೆ ಆಗಮಿಸಿದ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದರು. ದಕ್ಷಿಣ ತಮಿಳುನಾಡು ಭಾಗಗಳಲ್ಲಿ ಇಂದು ಮಳೆ ಸುರಿದಿದ್ದು, ಮಧುರೈ, ತಂಜಾವೂರು ಜಿಲ್ಲೆಗಳಲ್ಲಿ ಮಳೆ ಸುರಿದಿದೆ. ಮಳೆಯ ನಡುವೆಯೇ ಈ ಜಿಲ್ಲೆಗಳಲ್ಲಿ 11 ಗಂಟೆಯ ವೇಳೆಗೆ ಶೇ.9ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಇನ್ನು ಮತದಾನ ದಿನದಂದೇ ಹೊಸ ಜೀವನಕ್ಕೆ ಕಾಲಿಟ್ಟ ವಧು-ವರರ ಜೋಡಿ ವಿವಾಹದ ಉಡುಗೆಯಲ್ಲೇ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದು ವಿಶೇಷವಾಗಿತ್ತು. ಇದಲ್ಲದೆ ತಮಿಳುನಾಡಿ ಘಟಾನುಘಟಿ ನಾಯಕರಾದ ಸಿಎಂ ಜಯಲಲಿತಾ, ಎಂ ಕರುಣಾನಿಧಿ, ಅಳಗಿರಿ, ಸ್ಟಾಲಿನ್, ನಟ ರಜನಿಕಾಂತ್, ಕಮಲ್ ಹಾಸನ್, ಡಿಎಂಡಿಕೆ ಪಕ್ಷದ ವಿಜಯ್ ಕಾಂತ್ ಸೇರಿದಂತೆ ಹಲವು ಗಣ್ಯರು ತಮ್ಮ ಹಕ್ಕನ್ನು ಚಲಾಯಿಸಿದರು.
ಒಟ್ಟು 234 ಕ್ಷೇತ್ರಗಳ ಪೈಕಿ ಇಂದು 232 ಕ್ಷೇತ್ರಗಳಲ್ಲಿ ಮತದಾನವಾಗುತ್ತಿದ್ದು, ಸುಮಾರು 5.82 ಕೋಟಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ. ಉಳಿದ ಎರಡು ಕ್ಷೇತ್ರಗಳಾದ ತಂಜಾವೂರು ಮತ್ತು ಅರವಕುರಿಚ್ಚಿ ಕ್ಷೇತ್ರಗಳಿಗೆ ಮೇ 23ರಂದು ಮತದಾನ ನಡೆಯಲಿದೆ. ಈ ಕ್ಷೇತ್ರಗಳಲ್ಲಿ ಮತದಾರರಿಗೆ ವ್ಯಾಪಕವಾಗಿ ಹಣ ಹಂಚಲಾಗಿದೆ ಎಂಬ ಮಾಹಿತಿ ಮೇರೆಗೆ ಚುನಾವಣಾ ಆಯೋಗ ಮತದಾನ ಪ್ರಕ್ರಿಯೆಯನ್ನು ಮುಂದೂಡಿದೆ.