

ಲಕ್ನೋ: ಸಮಾಜವಾದಿ ಪಕ್ಷದ ಮಾಜಿ ನಾಯಕ ಅಮರ್ ಸಿಂಗ್ ಅವರನ್ನು ಮಂಗಳವಾರ ರಾಜ್ಯಸಭೆಗೆ ನಾಮ ನಿರ್ದೇಶನ ಮಾಡುವ ಮೂಲಕ ಮತ್ತೆ ಅವರು ತಮ್ಮ ಹಳೆಯ ಪಕ್ಷಕ್ಕೆ ಮರಳಿದ್ದಾರೆ. ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಅಮರ್ ಸಿಂಗ್ ಅವರ ಹೆಸರನ್ನು ಸೂಚಿಸಿದರು.
ಮುಂದಿನ ತಿಂಗಳು ರಾಜ್ಯಸಭಾ ಚುನಾವಣೆ ನಡೆಯಲಿದ್ದು, ಅದಕ್ಕೆ ಸಮಾಜವಾದಿ ಪಕ್ಷದಿಂದ ಏಳು ಮಂದಿ ನಾಯಕರ ಹೆಸರನ್ನು ನಾಮ ನಿರ್ದೇಶನಗೊಳಿಸಿದೆ.ಲಕ್ನೋದಲ್ಲಿ ಇಂದು ನಡೆದ ಸಮಾಜವಾದಿ ಪಕ್ಷದ ಕೇಂದ್ರ ಸಂಸದೀಯ ಮಂಡಳಿ ಸಭೆಯಲ್ಲಿ ಈ ಮುಖಂಡರು ಈ ನಿರ್ಧಾರ ತೆಗೆದುಕೊಂಡರು. ಸಭೆಯಲ್ಲಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಗೋಪಾಲ್ ಯಾದವ್, ಹಿರಿಯ ಸಚಿವರುಗಳು, ಮುಖ್ಯಮಂತ್ರಿ ಅಖಿಲೇಶ್ ಯಾದವ್, ಕಿರಣ್ಮಯಿ ನಂದ ಮೊದಲಾದವರು ಭಾಗವಹಿಸಿದ್ದರು.
ಒಂದು ಕಾಲದಲ್ಲಿ ಮುಲಾಯಂ ಸಿಂಗ್ ಯಾದವ್ ಅವರ ಅತ್ಯಾಪ್ತರಾಗಿದ್ದ ಅಮರ್ ಸಿಂಗ್ ಅವರನ್ನು 2009ರಲ್ಲಿ ಭಿನ್ನಾಭಿಪ್ರಾಯ ತಲೆದೋರಿ ಪಕ್ಷದಿಂದ ಉಚ್ಛಾಟಿಸಲಾಗಿತ್ತು. ನಂತರ ಅಮರ್ ಸಿಂಗ್ ತಮ್ಮದೇ ಪಕ್ಷ ಸ್ಥಾಪಿಸಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿಯೂ ಸ್ಪರ್ಧಿಸಿದ್ದರು. ನಂತರ ರಾಷ್ಟ್ರೀಯ ಲೋಕದಳ ಪಕ್ಷ ಸೇರಿದ್ದ ಅಮರ್ ಸಿಂಗ್ ಲೋಕಸಭಾ ಚುನಾವಣೆಯಲ್ಲಿಯೂ ಸ್ಪರ್ಧಿಸಿದ್ದರು.
ಅಮರ್ ಸಿಂಗ್ ಅವರು ಸಮಾಜವಾದಿ ಪಕ್ಷಕ್ಕೆ ಮತ್ತೆ ಸೇರುತ್ತಾರೆ ಎಂಬ ಊಹಾಪೋಹ ಇತ್ತೀಚೆಗೆ ಕೇಳಿಬರುತ್ತಿತ್ತು. ಅದಕ್ಕೆ ಇಂಬು ನೀಡುವಂತೆ ಅಮರ್ ಸಿಂಗ್ ಸಮಾಜವಾದಿ ಪಕ್ಷದ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಮುಲಾಯಂ ಸಿಂಗ್ ಮತ್ತು ಅಖಿಲೇಶ್ ಯಾದವ್ ಅವರ ಮನೆಗೆ ಆಗಾಗ ಭೇಟಿ ಕೊಡುತ್ತಿದ್ದರು.