

ಮುಂಬೈ: ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಅವರು ಮಾಡಿದ ಒಂದೇ ಒಂದು ಟ್ವೀಟ್ ನಿಂದಾಗಿ ನಾಪತ್ತೆಯಾಗಿದ್ದ ಯುವತಿಯರಿಬ್ಬರು ಸುರಕ್ಷಿತವಾಗಿ ತಮ್ಮ-ತಮ್ಮ ಮನೆ ಸೇರುವಂತಾಗಿದೆ.
ಆಶ್ಚರ್ಯವಾದರೂ ಇದು ಸತ್ಯ..ಇತ್ತೀಚೆಗಷ್ಟೇ ಪ್ರಕಟಗೊಂಡಿದ್ದ ದ್ವಿತೀಯ ಪಿಯುಸಿ ಸಿಬಿಎಸ್ ಇ ಫಲಿತಾಂಶದಲ್ಲಿ ಕಡಿಮೆ ಅಂಕಗಳು ಬಂದಿವೆ ಎಂದು ಮನೆಯವರು ಬೈದ ಕಾರಣದಿಂದ ಮನನೊಂದ ಪಶ್ಚಿಮ ಬಂಗಾಳದ 24 ಪರಗಣದ ಇಬ್ಬರು ಯುವತಿಯರು ಮನೆ ಬಿಟ್ಟು ಹೋಗಿದ್ದರು. ಯುವತಿಯರ ಪತ್ತೆಗಾಗಿ ಅವರ ಪೋಷಕರು ಸಾಕಷ್ಚು ಪ್ರಯತ್ನಿಸಿದ್ದರಾದರೂ, ಯುವತಿಯರು ಮಾತ್ರ ಪತ್ತೆಯಾಗಲಿಲ್ಲ. ಅಂತಿಮವಾಗಿ ಪೊಲೀಸ್ ಠಾಣೆಯ ಮೆಟ್ಟೇಲಿರಿದರೂ ಯುವತಿಯರ ಪತ್ತೆಯಾಗಲಿಲ್ಲ. ಇದರಿಂದ ಬೇಸತ್ತ ಯುವತಿಯರ ಪೋಷಕರೊಬ್ಬರು ಟ್ವಿಟರ್ ನಲ್ಲಿ ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಅವರಿಗೆ ಟ್ವೀಟ್ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಪೋಷಕರ ಟ್ವೀಟ್ ಉತ್ತರಿಸಿದ್ದ ಕೇಂದ್ರ ಸಚಿವ ಸುರೇಶ್ ಪ್ರಭು ಅವರು ತಮ್ಮ ಕೈಲಾಗುವ ಪ್ರಯತ್ನ ಮಾಡುವುದಾಗಿ ಪ್ರತಿಕ್ರಿಯಿಸಿದ್ದರು. ಬಳಿಕ ತಮ್ಮ ರೈಲ್ವೇ ಅಧಿಕಾರಿಗಳಿಗೆ ಟ್ವೀಟ್ ಮಾಡಿದ್ದ ಸುರೇಶ್ ಪ್ರಭು ಅವರು ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಕೂಡಲೇ ಅಲರ್ಟ್ ಆದ ಅಧಿಕಾರಿಗಳು ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಅಲರ್ಟ್ ಘೋಷಣೆ ಮಾಡಿ ಯುವತಿಯರಿಗಾಗಿ ಶೋಧ ನಡೆಸಿದ್ದರು.
ಅಂತಿಮವಾಗಿ ಅಧಿಕಾರಿಗಳ ಶೋಧ ಫಲಪ್ರಭವಾಗಿ ಮುಂಬೈನ ಸಿಎಸ್ ಟಿ ರೈಲು ನಿಲ್ದಾಣದಲ್ಲಿ ಯುವತಿಯರು ಪತ್ತೆಯಾಗಿದ್ದರು. ಮುಂಬೈನ ಸಿಎಸ್ ಟಿ ನಿಲ್ದಾಣದ ರೈಲ್ವೇ ಪೊಲೀಸ್ ಪಡೆಯ ಯೋಧರು ಯುವತಿಯರನ್ನು ವಶಕ್ಕೆ ಪಡೆದು ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಮುಂಬೈಗೆ ಆಗಮಿಸಿದ ಪೋಷಕರು ತಮ್ಮ ಮಕ್ಕಳನ್ನು ಸುರಕ್ಷಿತವಾಗಿ ವಾಪಸ್ ಪಡೆದು ತಮ್ಮ ಸ್ವಗ್ರಾಮಕ್ಕೆ ತೆರಳಿದ್ದಾರೆ.
ಒಟ್ಟಾರೆ ಸುರೇಶ್ ಪ್ರಭು ಅವರ ಒಂದೇ ಒಂದು ಟ್ವೀಟ್ ಇದೀಗ ಅಪಾಯದಲ್ಲಿ ಸಿಲುಕಿದ್ದ ಇಬ್ಬರು ಯುವತಿಯರು ಮತ್ತೆ ತಮ್ಮ ಪೋಷಕರ ಮಡಿಲು ಸೇರುವಂತೆ ಮಾಡಿದೆ. ಈ ಹಿಂದೆಯೂ ಇದೇ ಸುರೇಶ್ ಪ್ರಭು ಅವರ ಒಂದು ಟ್ವೀಟ್ ನಿಂದಾಗಿ ನಾಪತ್ತೆಯಾಗಿದ್ದ ಐದು ವರ್ಷದ ಪುಟ್ಟ ಬಾಲಕಿಯನ್ನು ಹುಡುಕಿ ಕೊಡುವಲ್ಲಿ ನೆರವಾಗಿತ್ತು.