ನೋಯ್ಡಾ: 12ನೇ ಸೆಕ್ಟರ್ನ ಸರಸ್ವತಿ ಶಿಶು ಮಂದಿರದ ಆವರಣದಲ್ಲಿ ಭಜರಂಗದಳ ಆಯೋಜಿಸಿರುವ ಆತ್ಮರಕ್ಷಣೆ ತರಬೇತಿ ಶಿಬಿರವನ್ನು ಸಮರ್ಥಿಸಿಕೊಂಡಿರುವ ವಿಶ್ವ ಹಿಂದು ಪರಿಷದ್ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಅವರು, ಆತ್ಮ ರಕ್ಷಣೆ ತರಬೇತಿ ಈಗ ಅನಿವಾರ್ಯವಾಗಿದೆ ಎಂದಿದ್ದಾರೆ.
ಇಂದು ಶಿಬಿರಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ತೊಗಾಡಿಯಾ, ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುವುದು ಅನಿವಾರ್ಯವಾಗಿದ್ದು, ಇದು ಸಹ ‘ಸಾಮಾಜಿಕ ಹೊಣೆಗಾರಿಕೆ’ಯ ಒಂದು ಭಾಗವಾಗಿದೆ. ಇದರಲ್ಲಿ ಯಾವುದೇ ಸಂವಿಧಾನ ವಿರೋಧಿ ಚಟುವಟಿಕೆ ಇಲ್ಲ ಎಂದರು.
ಭಾರತೀಯ ಸಂವಿಧಾನ ಮತ್ತು ಕಾನೂನು ಪ್ರಕಾರ, ಪ್ರತಿಯೊಬ್ಬರೂ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಹಕ್ಕು ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಭಜರಂಗದಳ 25 ವರ್ಷಗಳಿಂದ ಎಲ್ಲ ರಾಜ್ಯಗಳಲ್ಲೂ (ಕಾಂಗ್ರೆಸ್, ಸಮಾಜವಾದಿ, ಬಿಜೆಪಿ ಆಡಳಿತ ವಿರುವ ಪ್ರದೇಶದದಲ್ಲೂ) ಯುವ ಶೌರ್ಯ ಪ್ರಶಿಕ್ಷಣ ಶಿಬಿರ ನಡೆಸಿದೆ ಎಂದರು.
1951ರಲ್ಲಿ ದೇಶದ ಜನಸಂಖ್ಯೆ 30 ಕೋಟಿ ಇದ್ದಾಗ 10 ಲಕ್ಷ ರೋಗಿಗಳಿದ್ದರು. ಈಗ 125 ಕೋಟಿ ದಾಟಿರುವ ಜನಸಂಖ್ಯೆಗೆ ಅನುಗುಣವಾಗಿ 45ಲಕ್ಷ ರೋಗಿಗಳು ಇದ್ದಾರೆ. ನಿರಂತರ ಯೋಗ, ವ್ಯಾಯಾಮ ಮತ್ತು ದೈಹಿಕ ಕಸರತ್ತುಗಳು ಇಲ್ಲದ ಕಾರಣ ರೋಗಿಗಳ ಸಂಖ್ಯೆಯೂ ಇಮ್ಮಡಿಸಿದೆ. ಇಂತಹ ಶಿಬಿರ ಆಯೋಜನೆ ಮೂಲಕ ನಾವು ಸದೃಢ ಆರೋಗ್ಯವಂತರನ್ನೂ ದೇಶಕ್ಕೆ ನೀಡುತ್ತಿದ್ದೇವೆ ಎಂದು ತೊಗಾಡಿಯಾ ಹೇಳಿದ್ದಾರೆ.