

ಚೆನ್ನೈ: ನಿನ್ನ ತಂದೆಯನ್ನು ಶೂಟ್ ಮಾಡುತ್ತೇನೆ, ನಂತರ ನೀನು ಭಿಕ್ಷುಕಿಯಾಗುತ್ತೀಯ ಎಂದು ಪೊಲೀಸ್ ಅಧಿಕಾರಿಯೊಬ್ಬ 10 ವರ್ಷದ ಬಾಲಕಿಯೊಬ್ಬಳಿಗೆ ಬೆದರಿಕೆ ಹಾಕಿರುವುದಾಗಿ ಆರೋಪಗಳು ಕೇಳಿಬಂದಿದೆ.
ರಾಜಕೀಯ ಪಕ್ಷದ ಕಾರ್ಯದರ್ಶಿಯೊಬ್ಬರಿಗೆ ಬೆದರಿಕ ಹಾಕಿದ ಆರೋಪದ ಮೇಲೆ ಚೆನ್ನೈ ಪೊಲೀಸರು ಜಯಶಂಕರ್ ಎಂಬ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಇದರಂತೆ ವಿಚಾರಣೆ ನಂತರ ಜಯಕುಮಾರ್ ಅವರು ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನನ್ನು ಪಡೆದುಕೊಂಡಿದ್ದರು. ಇದೀಗ ಜಯಕುಮಾರ್ ಅವರು ಕುಟುಂಬ ಪೊಲೀಸರ ವಿರುದ್ಧ ರಾಜ್ಯ ಮಾನವ ಹಕ್ಕುಗಳ ಆಯೋಗ ಹಾಗೂ ಮಕ್ಕಳ ಕಲ್ಯಾಣ ಸಮಿತಿಗೆ ದೂರು ನೀಡಿದೆ.
ಏನಿದು ಪ್ರಕರಣ..?
ಚೆನ್ನೈನ ಪೊಲೀಸರು ಜಯಕುಮಾರ್ ಎಂಬ ವ್ಯಕ್ತಿಯನ್ನು ರಾಜಕೀಯ ಕಾರ್ಯದರ್ಶಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಕೆಲವು ದಿನಗಳ ಹಿಂದಷ್ಟೇ ಬಂಧಿಸಿದ್ದರು. ನಂತರ ನಿರೀಕ್ಷಣಾ ಜಾಮೀನು ಪಡೆದು ಜಯಕುಮಾರ್ ಹೊರ ಬಂದಿದ್ದರು.
ಇದಾದ ಕೆಲವೇ ದಿನಗಳಲ್ಲಿ ಪೊಲೀಸರು ಮತ್ತೆ ಜಯಕುಮಾರ್ ಅವರನ್ನು ಹುಡುಕಲು ಆರಂಭಿಸಿದ್ದಾರೆ. ಇದರಂತೆ ಮನೆಗೆ ಭೇಟಿ ನೀಡಿರುವ ಪೊಲೀಸರು ಜಯಕುಮಾರ್ ಗಾಗಿ ಹುಡುಕಾಟ ಆರಂಭಿಸಿದ್ದಾರೆ. ಇದೀಗ ಹುಡುಕಾಟ ಆರಂಭಿಸಿದ ಪೊಲೀಸರ ವಿರುದ್ಧ ಜಯಕುಮಾರ್ ಅವರ ಕುಟುಂಬ ಸದಸ್ಯರು ಆರೋಪಗಳನ್ನು ವ್ಯಕ್ತಪಡಿಸಿದ್ದಾರೆ.
ಮಧ್ಯರಾತ್ರಿ ಎದ್ದು ನೋಡಿದಾಗ ನನ್ನ ತಾಯಿ ಅಳುತ್ತಿದ್ದರು. ಈ ವೇಳೆ ಪೊಲೀಸರು ತಾಯಿ ಮೇಲೆ ಕಿರುಚಾಡುತ್ತಿದ್ದರು. ಹೀಗಾಗಿ ರೂಮಿನಿಂದ ನಾನು ಬಂದು ನೋಡಿದಾಗ ಪೊಲೀಸರು ನನ್ನನ್ನು ಎಳೆದಾಡಿದರು. ನಂತರ ಅಪ್ಪ ಎಲ್ಲಿ ಎಂದು ಕೇಳಿದರು. ನಿಮ್ಮ ಅಪ್ಪನಿಗೆ ಫೋನ್ ಮಾಡು ಎಂದು. ಅಪ್ಪನ ಫೋನ್ ಸ್ವಿಚ್ ಆಫ್ ಆಗಿದ್ದರಿಂತ ಫೋನ್ ಆಫ್ ಆಗಿದೆ ಎಂದು ಹೇಳಿದೆ. ಈ ವೇಳೆ ಪೊಲೀಸ್ ಅಧಿಕಾರಿ ನಿಮ್ಮ ಅಪ್ಪನನ್ನು ಶೂಟ್ ಮಾಡುತ್ತೇನೆ. ನೀನು ಭಿಕ್ಷುಕಿಯಾಗುತ್ತೀಯಾ ಎಂದು ಹೇಳಿದರು. ಅಲ್ಲದೆ, ಬೆಳಿಗ್ಗೆಯಾಗುತ್ತಿದ್ದಂತೆ ಠಾಣೆಗೆ ಬರುವಂತೆ ನನಗೆ ಹಾಗೂ ಅಮ್ಮನಿಗೆ ತಿಳಿಸಿದರು ಎಂದು ಬಾಲಕಿ ಒಲಿವ್ ಮೇರಿ ಹೇಳಿದ್ದಾರೆ.
ರಾತ್ರಿ 12.20ರ ಸುಮಾರಿಗೆ ಜೋರಾಗಿ ಬಾಗಿಲನ್ನು ಹೊಡೆಯುತ್ತಿರುವ ಸದ್ದು ಕೇಳಿತು. ಬಾಗಿಲು ತೆಗೆದಾಗ ಪೊಲೀಸ್ ಜೀಪ್ ಹೊರ ನಿಂತಿತ್ತು. ಈ ವೇಳೆ ಬಾಗಿಲನ್ನು ತೆಗೆಯುತ್ತಿದ್ದಂತೆ ಪೊಲೀಸರು ಒಳನುಗ್ಗಿದ್ದರು. ಇದರಲ್ಲಿ ಓರ್ವರು ಸಮವಸ್ತ್ರದಲ್ಲಿದ್ದರೆ, ಇಬ್ಬರು ನಾಗರೀಕ ವಸ್ತ್ರದಲ್ಲಿದ್ದರು. ಮನೆಯೆಲ್ಲಾ ಹುಡುಕಿದ ಪೊಲೀಸರು ಪತಿ ಎಲ್ಲಿ ಎಂದು ಕೇಳಿ ಇದ್ದಕ್ಕಿದ್ದಂತೆ ಕೂಗಾಡಲು ಆರಂಭಿಸಿದ್ದರು. ಈ ವೇಳೆ ನನ್ನ ಮಗಳನ್ನು ನೋಡಿ ಬೆದರಿಕೆ ಹಾಕಲು ಆರಂಭಿಸಿದ್ದರು. ನನ್ನ ಮಗಳು ಈಗಾಲೂ ಆ ಭಯದಲ್ಲೇ ಇದ್ದಾಳೆ ಎಂದು ಬಾಲಕಿ ತಾಯಿ ಕಯಲ್ವಾಜಿ ಹೇಳಿದ್ದಾರೆ.
ಇನ್ನು ಕುಟುಂಬಸ್ಥರ ಈ ಆರೋಪವನ್ನು ತಳ್ಳಿಹಾಕಿರುವ ಪೊಲೀಸ್ ಅಧಿಕಾರಿಗಳು, ಮನೆಗೆ ಭೇಟಿ ನೀಡಿದಾಗ ಮಗು ಮನೆಯಲ್ಲಿದೆ ಎಂಬುದೇ ನಮ್ಮ ಅರಿವಿಗೆ ಬಂದಿರಲಿಲ್ಲ. ಬಾಲಕಿಯ ಪೋಷಕರು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಮನೆಗೆ ಭೇಟಿ ನೀಡುತ್ತಿದ್ದಂತೆ ಅವರಿಗೆ ಗುರುತಿನ ಚೀಟಿಯನ್ನು ತೋರಿಸಲಾಯಿತು. ನಂತರ ಜಯಕುಮಾರ್ ಎಲ್ಲಿ ಎಂದು ಸೌಮ್ಯದಿಂದಲೇ ಕೇಳಲಾಗಿತ್ತು. ತಪಾಸಣೆ ವೇಳೆ ನಿಯಮದಂತೆ ಮಹಿಳಾ ಪೊಲೀಸರು ಇದ್ದರು ಎಂದು ಇನ್ಸ್ ಪೆಕ್ಟರ್ ಪಿ. ಜವಾಹರ್ ಅವರು ಹೇಳಿದ್ದಾರೆ.