ಲಕ್ನೋ: ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಗುರುವಾರ(ಇಂದು) ತಮ್ಮ ವಿಕಾಸ್ ರಥ ಯಾತ್ರೆಯನ್ನು ಆರಂಭಿಸಲಿದ್ದಾರೆ.
ಈ ಮಧ್ಯೆ ಸಮಾಜವಾದಿ ಪಕ್ಷದಲ್ಲಿನ ಗೊಂದಲ ಹಾಗೆಯೇ ಮಂದುವರಿದಿದೆ. ಅಖಿಲೇಶ್ ಯಾದವ್ ಅವರ ರಥ ಯಾತ್ರೆಯಲ್ಲಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಮತ್ತು ಅವರ ಸೋದರ ಶಿವಪಾಲ್ ಯಾದವ್ ಭಾಗವಹಿಸಲಿದ್ದಾರೆಯೇ ಇಲ್ಲವೇ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ.
ಅಖಿಲೇಶ್ ಯಾದವ್ ಅವರ ಬಹಳ ಪ್ರಚಾರದ ರಾಜಕೀಯ ಉದ್ದೇಶದ ರಥ ಯಾತ್ರೆಯಲ್ಲಿ ಲಕ್ಷಾಂತರ ಮಂದಿ ಯುವಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಮುಖ್ಯಮಂತ್ರಿ ಅಖಿಲೇಶ್ ಯಾದವ್ ರಾಜ್ಯಾದ್ಯಂತ ಸಂಚರಿಸಿ ಯುವಕರು, ರೈತರು, ಅಲ್ಪ ಸಂಖ್ಯಾತರು, ಮಹಿಳೆಯರನ್ನುದ್ದೇಶಿಸಿ ಮಾತನಾಡಲಿದ್ದಾರೆ.
ತಮ್ಮ ನಾಯಕತ್ವವನ್ನು ಗುರುತಿಸಿಕೊಂಡು ಮುಂಬರುವ ಚುನಾವಣೆಯಲ್ಲಿ ಅತ್ಯಧಿಕ ಮತ ಗಳಿಸುವುದು ಅಖಿಲೇಶ್ ಯಾದವ್ ಅವರ ಉದ್ದೇಶವಾಗಿದೆ.
ಯಾತ್ರೆಯ ಸಲುವಾಗಿ ರಾಜ್ಯದ ರಾಜಧಾನಿ ಲಕ್ನೋ, ಲಕ್ನೋ-ಕಾನ್ಪುರ ಹೆದ್ದಾರಿಗಳಲ್ಲಿ ಭಾರೀ ಸಂಚಾರ ದಟ್ಟಣೆ ಇಂದು ಆಗುವ ಸಾಧ್ಯತೆಯಿದೆ. ಅತಿ ಪ್ರಮುಖ ವ್ಯಕ್ತಿಗಳು ಸಂಚರಿಸಲಿರುವುದರಿಂದ ಯಾವುದೇ ತೊಂದರೆಯುಂಟಾಗಬಾರದು ಎಂಬ ಉದ್ದೇಶದಿಂದ ಲಕ್ನೋ ಹಾಗೂ ಸುತ್ತಮುತ್ತ ಶಾಲೆಗಳಿಗೆ ರಜೆ ನೀಡಲಾಗಿದೆ. ಅಖಿಲೇಶ್ ಯಾದವ್ ಅವರು ಅತ್ಯಾಧುನಿಕ ಮರ್ಸಿಡಿಸ್ ಬಸ್ ನಲ್ಲಿ ಲಕ್ನೋದಿಂದ ತಮ್ಮ ರಥ ಯಾತ್ರೆ ಆರಂಭಿಸಲಿದ್ದಾರೆ.