ದೇಶಕ್ಕಾಗಿ ಮನೆ, ಕುಟುಂಬವನ್ನು ತೊರೆದೆ: ಪ್ರಧಾನಿ ಮೋದಿ

ದೇಶಕ್ಕಾಗಿಯೇ ನಾನು ನನ್ನ ಮನೆ ಹಾಗೂ ಕುಟುಂಬವನ್ನು ತೊರೆದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಹೇಳಿದ್ದಾರೆ...
ಪ್ರಧಾನಮಂತ್ರಿ ನರೇಂದ್ರ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ
Updated on

ಪಣಜಿ: ದೇಶಕ್ಕಾಗಿಯೇ ನಾನು ನನ್ನ ಮನೆ ಹಾಗೂ ಕುಟುಂಬವನ್ನು ತೊರೆದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಹೇಳಿದ್ದಾರೆ.

ಗೋವಾದಲ್ಲಿ ಎರಡು ಪ್ರಮುಖ ಯೋಜನೆಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿರುವ ಅವರು, ಇದೇ ಮೊದಲ ಬಾರಿಗೆ ನೋಟು ನಿಷೇಧ ಕುರಿತಂತೆ ಮಾತನಾಡಿದ್ದಾರೆ.

ನಾನು ಶ್ರೀಮಂತ ಕುಟುಂಬದಲ್ಲಿ ಹುಟ್ಟಿ ಬಂದವನಲ್ಲ. ನನ್ನ ದೇಶಕ್ಕಾಗಿ ನಾನು ನನ್ನ ಕುಟುಂಬ ಹಾಗೂ ಮನೆಯನ್ನು ತೊರೆದೆ. ದೇಶಕ್ಕಾಗಿಯೇ ಕೆಲಸವನ್ನು ಮಾಡುತ್ತಿದ್ದೇನೆ. 70 ವರ್ಷಗಳಿಂದ ಬೆಳೆದುಬಂದಿದ್ದ ಭ್ರಷ್ಟಚಾರವೆಂಬ ಬೇರನ್ನು 17 ತಿಂಗಳಲ್ಲಿ ತೆಗೆದುಹಾಕಿದ್ದೇವೆ. ನಮಗೆ ಅಂಟಿಕೊಂಡಿರುವ ರೋಗದ ಪಾಲನ್ನು ಮುಂಬರುವ ಯುವಕರಿಗೇಕೆ ಕೊಡಬೇಕು? ಯಾರಿಗೆ ರಾಜಕೀಯ ಮಾಡಬೇಕೋ ಅವರು ಸ್ವತಂತ್ರವಾಗಿ ಮಾಡಲಿ ಎಂದು ಹೇಳಿದ್ದಾರೆ.

ಕಠಿಣ ನಿರ್ಧಾರದಿಂದಾಗಿ ಜನರು ಪಡುತ್ತಿರುವ ಕಷ್ಟವನ್ನು ನೋಡುತ್ತಿದ್ದರೆ ನನಗೆ ನೋವಾಗುತ್ತಿದೆ. ಅಹಂಕಾರದಿಂದ ಹಾಗೂ ಸರ್ವಾಧಿಕಾರದಿಂದ ನಾನು ಈ ನಿರ್ಧಾರವನ್ನು ತೆಗೆದುಕೊಂಡಿಲ್ಲ. ನಾನೂ ಕೂಡ ಬಡತನ ಹಾಗೂ ಕಷ್ಟವನ್ನು ನೋಡಿದ್ದೇನೆ. ಜನರ ಕಷ್ಟ ನನಗೆ ಅರ್ಥವಾಗುತ್ತಿದೆ. ದೊಡ್ಡ ದೊಡ್ಡ ಹಗರಣದಲ್ಲಿ ತೊಡಗಿಕೊಂಡವರೂ ಕೂಡ ಇಂದು ರು.4000 ಹಣವನ್ನ ಬದಲು ಮಾಡಿಕೊಳ್ಳಬೇಕಿದೆ.

ಭ್ರಷ್ಟಾಚಾರ ವಿರುದ್ಧದ ಹೋರಾಟ ಮಾಡುವುದಾಗಿ ನಾನು ಹೇಳಿದ್ದೆ, ಆ ಮಾತನ್ನು ಉಳಿಸಿಕೊಳ್ಳುತ್ತಿದ್ದೇನೆ. ಕುರ್ಚಿ ಗಟ್ಟಿ ಮಾಡಿಕೊಳ್ಳುವುದರ ಬಗ್ಗೆ ನನಗೆ ಆಸಕ್ತಿಯಿಲ್ಲ. ನಮ್ಮ ಸರ್ಕಾರ ಬಡವರ ಶಕ್ತಿಯನ್ನು ಹೆಚ್ಚಿಸಲು ಕೆಲಸ ಮಾಡುತ್ತಿದೆ. ನಿರ್ಧಾರ ಕೈಗೊಳ್ಳುವಾಗ ಆಭರಣಗಳ ಖರೀದಿ ಮೇಲೆ ಪ್ಯಾನ್ ಕಾರ್ಡ್ ಖಡ್ಡಾಯ ಮಾಡದಂತೆ ಸಾಕಷ್ಟು ಸಂಸದರು ನನಗೆ ಸಲಹೆ ನೀಡಿದರು. ಆದರೆ, ಅದನ್ನು ನಾನು ಕೇಳಲಿಲ್ಲ ಎಂದು ತಿಳಿಸಿದ್ದಾರೆ.

ಭಾರತದಲ್ಲಿ ಲೂಟಿ ಮಾಡಿರುವ ಹಣ ಭಾರತಕ್ಕೇ ಸೇರಬೇಕಿದೆ. ಅದನ್ನು ಕಂಡು ಹಿಡಿಯಬೇಕಾದದ್ದೂ ನಮ್ಮ ಕರ್ತವ್ಯವಾಗಿದೆ. ಕಪ್ಪು ಹಣ ಪಿಡುಗನ್ನು ತೊಲಗಿಸುವಂತೆ ದೇಶದ ಜನತೆ ನನ್ನ ಬಳಿ ಹೇಳಿದಾಗ, ಅದನ್ನು ಮಾಡುವುದಿಲ್ಲ ಎಂದು ಹೇಳುವುದು ಹೇಗೆ ಸಾಧ್ಯ?... ಜನರು ನಮ್ಮ ಸರ್ಕಾರವನ್ನು ಆಯ್ಕೆ ಮಾಡಿದ್ದಾರೆ. ನಮ್ಮ ಸರ್ಕಾರದ ಮೇಲೆ ಜನರಿಗೆ ಸಾಕಷ್ಟು ನಿರೀಕ್ಷೆ ಹಾಗೂ ಭರವಸೆಗಳಿವೆ. 2014ರಲ್ಲಿ ಸ್ವತಂತ್ರ ರಾಷ್ಟ್ರ ಹಾಗೂ ಭ್ರಷ್ಟಾಚಾರ ಮುಕ್ತ ರಾಷ್ಟ್ರಕ್ಕಾಗಿ ಜನರು ತಮ್ಮ ಅಮೂಲ್ಯವಾದ ಮತವನ್ನು ನಮಗೆ ನೀಡಿದ್ದಾರೆ. ಕಪ್ಪು ಹಣ ಹಾಗೂ ಭ್ರಷ್ಟಾಚಾರವನ್ನು ತೊಲಗಿಸುವುದಕ್ಕೆ ಈ ನಿರ್ಧಾರ ಪ್ರಮುಖವಾಗಿತ್ತು. ಕಠಿಣ ನಿರ್ಧಾರದಿಂದಾಗಿ ಕೆಲವರು ತಮ್ಮ ಸ್ವಂತ ಪ್ರಪಂಚವನ್ನು ಕಳೆದುಕೊಂಡಿದ್ದಾರೆ.

ನವೆಂಬರ್ 8 ರಂದು ತೆಗೆದುಕೊಂಡ ಕಠಿಣ ನಿರ್ಧಾರದಿಂದ ಬಹುತೇಕ ಭಾರತೀಯರು ಕಣ್ಣು ಮುಚ್ಚಿ ನೆಮ್ಮದಿಯಿಂದ ನಿದ್ರೆ ಮಾಡಿದ್ದಾರೆ. ಇನ್ನು ಕೆಲವರಿಗೆ ಇಂದಿಗೂ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

ತದನಂತರ ಗೋವಾ ರಾಜ್ಯ ಕುರಿತಂತೆ ಮಾತನಾಡಿದ ಅವರು, ರಾಜಕೀಯ ಅಸ್ಥಿರತೆ ಗೋವಾ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತಿದೆ. ಈ ಅಸ್ಥಿರತೆಯಿಂದಾಗಿ ಗೋವಾ ರಾಜ್ಯ ತನ್ನಲ್ಲಿರುವ ಶಕ್ತಿಯನ್ನು ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಗೋವಾದಲ್ಲಿರುವ ರಾಜಕೀಯ ಅಸ್ಥಿರತೆಯನ್ನು ಸರಿಪಡಿಸುವಂತೆ ಮನೋಹರ್ ಪರಿಕ್ಕರ್ ಅವರಿಗೆ ತಿಳಿಸಿದ್ದೆ. ಇದೀಗ ಗೋವಾದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ನಡೆಯುತ್ತವೆ. ಮನೋಹರ್ ಪರಿಕ್ಕರ್ ಅವರ ಪರಿಶ್ರಮದಿಂದ ಗೋವಾ ರಾಜ್ಯ ಇಂದು ರಾಜಕೀಯ ಸ್ಥಿರತೆಯನ್ನು ಕಾಣುತ್ತಿದೆ. ಇದೀಗ ಅಲ್ಲಿನ ಸರ್ಕಾರ ರಾಜ್ಯದ ಕಲ್ಯಾಣಕ್ಕಾಗಿ ಕೆಲಸವನ್ನು ಮಾಡುತ್ತಿದೆ.

ಒಂದೆಡೆ ರಾಜ್ಯದ ಮುಖ್ಯಮಂತ್ರಿಗಳು, ರಕ್ಷಣಾ ಸಚಿವರು ಹಾಗೂ ನಾನು ರಾಜ್ಯದ ಅಭಿವೃದ್ಧಿಯನ್ನು ಪ್ರೋತ್ಸಾಹಿಸಿದರೆ, ಮತ್ತೊಂದೆಡೆ ಮತ್ತೊಬ್ಬರು ಈ ಬಗ್ಗೆ ವಾದ ಮಾಡಿದರೆ ಇದನ್ನೂ ರಾಜಕೀಯ ಅಸ್ಥಿರತೆ ಎಂದು ಕರೆಯಲಾಗುತ್ತದೆ. ಈ ಹಿಂದೆ ನಿಯತಕಾಲಿಕೆಯೊಂದು ಗೋವಾ ಅಭಿವೃದ್ಧಿಯನ್ನು ಹೊಗಳಿ ವರದಿ ಮಾಡಿತ್ತು. ಅಟಲ್ ಬಿಹಾರಿ ವಾಜಪೇಯಿಯವರ ಅಧಿಕಾರಾವಧಿಯಲ್ಲಿ ನೀಡಲಾಗಿದ್ದ ಭರವಸೆಯನ್ನು ನಾವು ಈಡೇರಿಸುತ್ತಿದ್ದೇವೆ. ಇದಕ್ಕೆ ನನಗೆ ಸಂತಸವಿದೆ. ಅಭಿವೃದ್ಧಿ ಕಾರ್ಯಗಳು ಗೋವಾ ರಾಜ್ಯಕ್ಕೆ ಸಹಾಯವಾಗಲಿವೆ ಎಂದು ಹೇಳಿದ್ದಾರೆ. ಇದೇ ವೇಳೆ ಬ್ರಿಕ್ಸ್ 2016 ಶೃಂಗಸಭೆ ಯಶಸ್ವಿಯಾಗಿದ್ದಕ್ಕಾಗಿ ನಾಯಕರಿಗೆ ಶುಭಾಶಯಗಳನ್ನು ಕೋರಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com