ಭುವನೇಶ್ವರ: ಕಪ್ಪು ಹಣ ಹಾಗೂ ನಕಲಿ ನೋಟ್ ನಿಯಂತ್ರಿಸಲು ಕೇಂದ್ರ ಸರ್ಕಾರ 500 ಹಾಗೂ 1000 ರುಪಾಯಿ ನೋಟ್ ನಿಷೇಧಿಸಿದ ಬೆನ್ನಲ್ಲೇ ಒಡಿಶಾದಲ್ಲಿ 10 ರುಪಾಯಿ ನಾಣ್ಯ ನಿಷೇಧಿಸಲಾಗಿದೆ ಎಂಬ ವದಂತಿ ಜನತೆಯಲ್ಲಿ ತೀವ್ರ ಆತಂಕ ಸೃಷ್ಟಿ ಮಾಡಿದೆ.
ಮಾರುಕಟ್ಟೆಯಲ್ಲಿ ಎರಡು ಮಾದರಿಯ 10 ರುಪಾಯಿಯ ನಕಲಿ ನಾಣ್ಯಗಳು ಚಲಾವಣೆಯಾಗುತ್ತಿದ್ದು, ಇದನ್ನು ತಡೆಯಲು ಆರ್ ಬಿಐ 10 ರುಪಾಯಿ ನಾಣ್ಯಗಳನ್ನು ನಿಷೇಧಿಸಿದೆ ಎಂಬ ವದಂತಿ ಒಡಿಶಾದಲ್ಲಿ ಹರಿದಾಡುತ್ತಿದೆ.
ಈ ವದಂತಿಯಿಂದಾಗಿ ಸಣ್ಣ ವ್ಯಾಪಾರಿಗಳು, ಆಟೋ ಚಾಲಕರು 10 ರುಪಾಯಿಯ ನಾಣ್ಯವನ್ನು ಸ್ವೀಕರಿಸುತ್ತಿಲ್ಲ. ಅಲ್ಲದೆ ಹಲವು ಸಣ್ಣ ಅಂಗಡಿಗಳಲ್ಲೂ 10 ರುಪಾಯಿ ನಾಣ್ಯ ಸ್ವೀಕರಿಸುತ್ತಿಲ್ಲ ಎನ್ನಲಾಗಿದೆ.
'ನಾನು 10 ರುಪಾಯಿ ನಾಣ್ಯ ನೀಡಲು ಹೋದಾಗ ಆಟೋ ಚಾಲಕ ಅದನ್ನು ತೆಗೆದುಕೊಳ್ಳದೆ 10 ರುಪಾಯಿ ನೋಟ್ ಕೊಡಿ, ನಾಣ್ಯ ನಿಷೇಧಿಸಲಾಗಿದೆ ಎಂದ. ಇದರಿಂದ ನನಗೆ ಶಾಕ್ ಆಯಿತು' ಎಂದು ಭುವನೇಶ್ವರ ನಿವಾಸಿ ರಂಜಿತ್ ಶಾಹು ಅವರು ಹೇಳಿದ್ದಾರೆ.
ಈ ಮಧ್ಯೆ, ಯಾವುದೇ ನಾಣ್ಯ ನಿಷೇಧಿಸಿಲ್ಲ ಎಂದು ಸ್ಪಷ್ಟಪಡಿಸಿರುವ ಆರ್ ಬಿಐ, 10 ನಾಣ್ಯ ಸ್ವೀಕರಿಸದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಸಿದೆ.