

ಪಣಜಿ: ಮಿಷಿನ್ ಗನ್ ಹಿಡಿದು ಗುಂಡು ಹಾರಿಸಲು ಯಾರೇ ಬಂದರೂ ಅವರು ಗುಂಡು ಹಾರಿಸುವುದಕ್ಕೂ ಮುನ್ನವೇ ತಕ್ಕ ಶಾಸ್ತಿ ಮಾಡಿ ಎಂದು ಭಾರತೀಯ ಯೋಧರಿಗೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಭಾನುವಾರ ನಿರ್ದೇಶಿಸಿದ್ದಾರೆ.
ಬಿಜೆಪಿ ಆಯೋಜಿಸಿದ್ದ ವಿಜಯ್ ಸಂಕಲ್ಪ್ ಸಭೆಯಲ್ಲಿ ಮಾತನಾಡಿರುವ ಅವರು, ನಮ್ಮ ಯೋಧರಿಗೆ ಸರಿಯಾದ ರೀತಿಯಲ್ಲಿ ನಿರ್ದೇಶನವನ್ನು ನೀಡಲಾಗಿದ್ದು, ಮಿಷಿನ್ ಗನ್ ಹಿಡಿದು ಯಾರೇ ಬಂದರೂ ಅವರು ಗುಂಡು ಹಾರಿಸುವುದಕ್ಕೂ ಮುನ್ನವೇ ಅವರನ್ನು ನೀವೇ ಮೊದಲು ಹತ್ಯೆ ಮಾಡಿ ಬಿಡಿ ಎಂದು ತಿಳಿಸಿದ್ದೇನೆ.
ಈ ಮೂಲಕವಷ್ಟೇ ನಾವು ನಮ್ಮ ಶತ್ರುಗಳಿಗೆ ದಿಟ್ಟ ಉತ್ತರ ನೀಡಲು ಸಾಧ್ಯ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಮ್ಮ ಗಮನ ನಮ್ಮ ಯೋಧರ ಸುರಕ್ಷತೆ ಮೇಲಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ವಿರೋಧ ಪಕ್ಷಗಳ ವಿರುದ್ಧ ಕಿಡಿಕಾಡಿರುವ ಅವರು, ದೇಶದ ಭದ್ರತೆ ಬಗ್ಗೆ ಇದೀಗ ಮಾತನಾಡುತ್ತಿರುವವರು, 30 ವರ್ಷಗಳ ಕಾಲ ಭ್ರಷ್ಟಾಚಾರ ನಡೆಸಿರುವುದನ್ನು ನೆನೆಪಿಸಿಕೊಳ್ಳಬೇಕಿದೆ. ಹೊಸ ಫಿರಂಗಗಿಗಳನ್ನು ಕೊಂಡುಕೊಳ್ಳಲು ನಿಮಗೆ ಧೈರ್ಯವಿರಲಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎಂ777 ಫಿರಂಗಿ ಖರೀದಿ ಮಾಡಿತು ಎಂದು ತಿಳಿಸಿದ್ದಾರೆ.