ಗಯಾ: ಬಿಹಾರದ ಗಯಾ ಜಿಲ್ಲೆಯ ಗ್ರಾಮೀಣ ಬ್ಯಾಂಕ್ ವೊಂದರಲ್ಲಿ ಶಸ್ತ್ರ ಸಜ್ಜಿತ ದುಷ್ಕರ್ಮಿಗಳ ತಂಡ 21.30 ಲಕ್ಷ ರುಪಾಯಿ ಲೂಟಿ ಮಾಡಿದ್ದು, ಆ ಪೈಕೆ 20.10 ಲಕ್ಷ ರುಪಾಯಿ ಮೌಲ್ಯದ ಹಳೆ ನೋಟ್ ಗಳಿವೆ.
ಬೈಕ್ ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಮಧ್ಯ ಬಿಹಾರ ಗ್ರಾಮೀಣ ಬ್ಯಾಂಕ್ ನ ವ್ಯವಸ್ಥಾಪಕಿಗೆ ಗನ್ ತೊರಿಸಿ 21.30 ಲಕ್ಷ ರುಪಾಯಿ ಲೂಟಿ ಮಾಡಿದ್ದಾರೆ.
ಲೂಟಿ ಮಾಡಿದ ಹಣದ ಪೈಕಿ ಕೇವಲ 1.20 ಲಕ್ಷ ರುಪಾಯಿ ಮಾತ್ರ ಹೊಸ ನೋಟ್ ಗಳಿದ್ದು, ಉಳಿದದ್ದು ನಿಷೇಧಿತ 500 ಹಾಗೂ 1000 ರುಪಾಯಿ ನೋಟ್ ಗಳಾಗಿವೆ ಎಂದು ಗಯಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಲೋಕ್ ಕುಮಾರ್ ಸಿಂಗ್ ಅವರು ತಿಳಿಸಿದ್ದಾರೆ.
ಘಟನೆ ನಡೆದ ವೇಳೆ ಬ್ಯಾಂಕ್ ನಲ್ಲಿ ಕೇವಲ ಇಬ್ಬರು ಗ್ರಾಹಕರು ಮಾತ್ರ ಇದ್ದರು ಎನ್ನಲಾಗಿದ್ದು, ಹಣ ಲೂಟಿ ಮಾಡಿ ನಾಪತ್ತೆಯಾಗಿರುವ ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಲೋಕ್ ಕುಮಾರ್ ಸಿಂಗ್ ಅವರು ಹೇಳಿದ್ದಾರೆ.