

ನವದೆಹಲಿ: ರು.500 ಹಾಗೂ 1,000 ಮುಖಬೆಲೆಯ ನೋಟಿನ ಮೇಲೆ ನಿಷೇಧ ಹೇರಿರುವ ಹಿನ್ನೆಲೆಯಲ್ಲಿ ವಾಗ್ದಾಳಿ ನಡೆಸುತ್ತಿರುವ ವಿರೋಧ ಪಕ್ಷಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಕ್ರವಾರ ತಿರುಗೇಟು ನೀಡಿದ್ದಾರೆ.
ಸಂವಿಧಾನ ದಿನ ಹಿನ್ನಲೆಯಲ್ಲಿ ಸಂಸತ್ ಭವನದಲ್ಲಿ ಏರ್ಪಡಿಸಲಾಗಿದ್ದ 'ಭಾರತೀಯ ಸಂವಿಧಾನ ರಚನೆ ಮತ್ತು ಭಾರತ ಸಂವಿಧಾನ ಪರಿಷೃತ ಆವೃತ್ತಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿರುವ ಅವರು, ದುಬಾರಿ ನೋಟಿನ ಮೇಲಿನ ನಿಷೇಧ ಕಪ್ಪು ಹಣದ ವಿರುದ್ಧದ ಹೋರಾಟದಲ್ಲಿ ಸಾಮಾನ್ಯ ಜನರ ಶಕ್ತಿಯನ್ನು ಬಲಪಡಿಸುತ್ತದೆ. ಕೇಂದ್ರ ಸರ್ಕಾರದ ಈ ನಡೆಯನ್ನು ವಿರೋಧ ಪಕ್ಷಗಳು ಟೀಕಿಸುತ್ತಿದ್ದು, ವಿರೋಧ ವ್ಯಕ್ತಪಡಿಸುತ್ತಿರುವವರು ತಾವು ಎಲ್ಲಿ ಸಿಕ್ಕಿ ಬೀಳುತ್ತೇವೆಯೋ ಎಂಬ ಭಯದಲ್ಲಿ ಗೊಂದಲಕ್ಕೀಡಾಗಿದ್ದಾರೆಂದು ಹೇಳಿದ್ದಾರೆ.
ನೋಟು ನಿಷೇಧವನ್ನು ಟೀಕಿಸುತ್ತಿರುವವರಿಗೆ ಸರ್ಕಾರ ಒಳ್ಳೆಯ ನಿರ್ಧಾರದ ಬಗ್ಗೆ ಸಮಸ್ಯೆಯಿಲ್ಲ. ಆದರೆ, ಅವರಿಗೆ ತಯಾರಾಗಲು ಸಮಯ ನೀಡಿಲಿಲ್ಲ ಎನ್ನುವುದೇ ಅವರ ದೊಡ್ಡ ಸಮಸ್ಯೆಯಾಗಿದೆ. ಇಂತಹ ಜನರಿಗೆ ನಿಗದಿತ ಸಮಯದ ಬಳಿಕ ಮತ್ತೆ 72 ಗಂಟೆಗಳ ಕಾಲ ಕಾಲಾವಕಾಶ ನೀಡಿದಾಗಲೂ ಕೂಡ ತಯಾರಾಗಲು ಸಾಧ್ಯವಾಗಲಿಲ್ಲ.
ಇಂದು ಭಾರತ ಕಪ್ಪುಹಣ ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿದ್ದು, ಭಾರತದಲ್ಲಿರುವ ಪ್ರತೀಯೊಬ್ಬ ಸಾಮಾನ್ಯ ನಾಗರೀಕರನೂ ಯೋಧನಂತೆ ಹೋರಾಟದಲ್ಲಿ ಕೈಜೋಡಿಸಿದ್ದಾನೆ.
70 ವರ್ಷಗಳ ಕಾಲ ದೇಶವನ್ನಾಳಿದವರು ಇಂದು ದೇಶವನ್ನು ಭ್ರಷ್ಟಾಚಾರವೆಂಬ ಕೂಪಕ್ಕೆ ತಳ್ಳಿದ್ದಾರೆ. ದೇಶ ತಲೆಯೆತ್ತಿ ನಿಲ್ಲಬೇಕಿದ್ದರೆ, ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಲೇಬೇಕಿದೆ. ನಗದು ಚಲಾವಣೆಯಲ್ಲಿ ತಾಂತ್ರಿಕತೆಯನ್ನು ಅಭಿವೃದ್ಧಿಪಡಿಸಬೇಕಿದ್ದು, ತಾಂತ್ರಿಕತೆಯಲ್ಲಿ ಪಾರದರ್ಶಕತೆಯನ್ನು ತರಬೇಕಿದೆ. ಮೊಬೈಲ್ ಮೂಲಕ ಶಾಪಿಂಗ್ ಮಾಡುವುದು, ಮೊಬೈಲ್ ನಲ್ಲಿ ಸಂದೇಶಗಳನ್ನು ಕಳುಹಿಸುವಷ್ಟೇ ಸುಲಭವಾಗಿರುತ್ತದೆ. ನಗದು ರಹಿತ ದೇಶವಾಗಿಸುವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.
ನಂತರ ಪುಸ್ತಕ ಬಿಡುಗಡೆ ಬಗ್ಗೆ ಮಾತನಾಡಿದ ಅವರು, ಸಂವಿಧಾನದ ವಿಚಾರ ನೆನಪಿಸಿದಾಗಲೆಲ್ಲಾ ಮಹಾನ್ ಸ್ವಾತಂತ್ರ್ಯ ಹೋರಾಟಗಾರ, ಸಂವಿಧಾನ ಶಿಲ್ಭಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ನೆನಪಾಗುತ್ತದೆ. ಸಂವಿಧಾನದಲ್ಲಿರುವ ಕಾಯ್ದೆಗಳನ್ನು ತಿಳಿದುಕೊಳ್ಳುವುದಕ್ಕಿಂತಲೂ ಸಂವಿಧಾನದ ಜೊತೆಗೆ ಭಾವನಾತ್ಮಕ ಸಂಪರ್ಕವನ್ನು ಹೊಂದುವುದು ಮುಖ್ಯವಾಗುತ್ತದೆ. ಯುವಜನತೆಯಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ. ನವೆಂಬರ್ 26ನ್ನು ಸಂವಿಧಾನ ದಿನಾಚರಣೆಯಾಗಿ ಆಚರಣೆ ಮಾಡಲಾಗುತ್ತದೆ. ನ.26ರ ಆಚರಣೆ ಇಲ್ಲದೆಯೇ, ಜನವರಿ 26ರ ಗಣರಾಜ್ಯೋತ್ಸವ ದಿನಾಚರಣೆ ಅಪೂರ್ಣ ಎಂದು ತಿಳಿಸಿದ್ದಾರೆ.