ವಿಪಕ್ಷಗಳ ವಿರುದ್ಧ ಹೇಳಿಕೆ: ಮೋದಿ ಕ್ಷಮೆಯಾಚಿಸುವಂತೆ ರಾಜ್ಯಸಭೆಯಲ್ಲಿ ಗದ್ದಲ

ನೋಟು ನಿಷೇಧ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿರೋಧ ಪಕ್ಷಗಳ ವಿರುದ್ಧ ಆಧಾರ ರಹಿತ ಹೇಳಿಕೆಗಳನ್ನು ನೀಡಿದ್ದು, ಕೂಡಲೇ ಕ್ಷಮೆಯಾಚಿಸಬೇಕೆಂದು ವಿರೋಧ ಪಕ್ಷಗಳು ರಾಜ್ಯಸಭಾ ಕಲಾಪದಲ್ಲಿ ತೀವ್ರ ಗದ್ದಲವನ್ನುಂಟು...
ರಾಜ್ಯಸಭೆ
ರಾಜ್ಯಸಭೆ
Updated on: 

ನವದೆಹಲಿ: ನೋಟು ನಿಷೇಧ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿರೋಧ ಪಕ್ಷಗಳ ವಿರುದ್ಧ ಆಧಾರ ರಹಿತ ಹೇಳಿಕೆಗಳನ್ನು ನೀಡಿದ್ದು, ಕೂಡಲೇ ಕ್ಷಮೆಯಾಚಿಸಬೇಕೆಂದು ವಿರೋಧ ಪಕ್ಷಗಳು ರಾಜ್ಯಸಭಾ ಕಲಾಪದಲ್ಲಿ ತೀವ್ರ ಗದ್ದಲವನ್ನುಂಟು ಮಾಡಿವೆ.

ರಾಜ್ಯಸಭೆ ಕಲಾಪ ಆರಂಭವಾಗುತ್ತಿದ್ದಂತೆಯೇ ನೋಟು ನಿಷೇಧ ಕುರಿತಂತೆ ತಮ್ಮ ವಿರೋಧ ವ್ಯಕ್ತಪಡಿಸಿದ ಪ್ರತಿಪಕ್ಷ ಮುಖಂಡರು ಈಗಲೇ ಪ್ರಧಾನಿ ನರೇಂದ್ರ ಮೋದಿ ಅವರು ಕಲಾಪಕ್ಕೆ ಆಗಮಿಸಿ ಈ ಬಗ್ಗೆ ಪ್ರತಿಕ್ರಿಯೆ ನೀಡಬೇಕು. ಅವರು ಕಲಾಪಕ್ಕೆ ಆಗಮಿಸದಿದ್ದರೇ ಕಲಾಪವನ್ನು ನಡೆಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಕಲಾಪವನ್ನು 12 ಗಂಟೆಗೆ ಮುಂದೂಡಲಾಗಿತ್ತು.

ಇದೀಗ ಮತ್ತೆ ಕಲಾಪ ಆರಂಭಗೊಂಡಿದ್ದು, ಮತ್ತೆ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ವಿರೋಧ ಪಕ್ಷಗಳು ವಾಗ್ದಾಳಿ ನಡೆಸಲು ಆರಂಭಿಸಿವೆ.

ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಮಾತನಾಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನೋಟು ನಿಷೇಧ ಕುರಿತಂತೆ ಪ್ರತಿಭಟನೆ ನಡೆಸುತ್ತಿರುವ ಪ್ರತಿಪಕ್ಷಗಳಿಗೆ ತಿರುಗೇಟಿ ನೀಡಿದ್ದರು. ನೋಟು ನಿಷೇಧವನ್ನು ಟೀಕಿಸುತ್ತಿರುವವರಿಗೆ ಸರ್ಕಾರ ಒಳ್ಳೆಯ ನಿರ್ಧಾರದ ಬಗ್ಗೆ ಸಮಸ್ಯೆಯಿಲ್ಲ. ಆದರೆ, ಅವರಿಗೆ ತಯಾರಾಗಲು ಸಮಯ ನೀಡಿಲಿಲ್ಲ ಎನ್ನುವುದೇ ಅವರ ದೊಡ್ಡ ಸಮಸ್ಯೆಯಾಗಿದೆ. ಕೇಂದ್ರ ಸರ್ಕಾರದ ನೋಟು ನಿಷೇಧ ನಡೆಯನ್ನು ವಿರೋಧ ಪಕ್ಷಗಳು ಟೀಕಿಸುತ್ತಿದ್ದು, ವಿರೋಧ ವ್ಯಕ್ತಪಡಿಸುತ್ತಿರುವವರು ತಾವು ಎಲ್ಲಿ ಸಿಕ್ಕಿ ಬೀಳುತ್ತೇವೆಯೋ ಎಂಬ ಭಯದಲ್ಲಿ ಗೊಂದಲಕ್ಕೀಡಾಗಿದ್ದಾರೆಂದು ಹೇಳಿದ್ದರು.

ಈ ಹೇಳಿಕೆಗೆ ರಾಜ್ಯಸಭಾ ಕಲಾಪದಲ್ಲಿ ವಿರೋಧ ಪಕ್ಷಗಳು ತೀವ್ರ ವಿರೋಧವನ್ನು ವ್ಯಕ್ತಪಡಿಸುತ್ತಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೂಡಲೇ ಕ್ಷಮೆಯಾಚಿಸಬೇಕೆಂದು ಆಗ್ರಹಿಸುತ್ತಿವೆ.

ವಿರೋಧ ಪಕ್ಷಗಳು ಕಪ್ಪುಹಣದ ಪರವಾಗಿವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿದ್ದಾರೆ. ಈ ರೀತಿಯ ಹೇಳಿಕೆಗಳು ಸಂಸತ್ತಿಗೆ ಹಾಗೂ ಎಲ್ಲಾ ವಿರೋಧ ಪಕ್ಷಗಳಿಗೆ ಅವಮಾನ ಮಾಡಿದಂತಾಗಿದೆ. ವಿರೋಧ ಪಕ್ಷಗಳ ವಿರುದ್ಧ ಮೋದಿಯವರು ಈ ರೀತಿಯ ಆರೋಪಗಳನ್ನು ಹೇಗೆ ಮಾಡಲು ಸಾಧ್ಯ? ಎಂದು ರಾಜ್ಯಸಭಾ ಉಪಸಭಾಪತಿ ಪಿ.ಜೆ. ಕುರಿಯನ್ ಯವರಿಗೆ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್ ಅವರು ಕೇಳಿದರು.

ಗುಲಾಂ ನಬಿ ಆಜಾದ್ ಅವರ ಹೇಳಿಕೆಗೆ ಜನತಾ ದಳ ಪಕ್ಷದ ನಾಯಕ ಶರದ್ ಯಾದವ್, ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿಯವರೂ ಸಾಥ್ ನೀಡಿದರು. ಅಲ್ಲದೆ, ಪ್ರಧಾನಿ ಮೋದಿಯವರೂ ಕೂಡಲೇ ಕ್ಷಮೆಯಾಚಿಸುವಂತೆ ಆಗ್ರಹಿಸಿದರು.

ವಿರೋಧ ಪಕ್ಷಗಳ ವಿರುದ್ಧ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗಂಭೀರವಾದ ಆರೋಪವನ್ನು ಮಾಡಿದ್ದು ಕೂಡಲೇ ಕ್ಷಮೆಯಾಚಿಸಬೇಕೆಂದು ಯಾದವ್ ಅವರು ಆಗ್ರಹಿಸಿದರು.

ಮೋದಿಯವರು ಕೂಡಲೇ ಕಲಾಪಕ್ಕೆ ಹಾಜರಬೇಕಿದ್ದು, ಹೇಳಿಕೆ ಕುರಿತಂತೆ ವಿರೋಧ ಪಕ್ಷಗಳ ಬಳಿ ಕ್ಷಮೆಯಾಚಿಸಬೇಕು ಹಾಗೂ ಯಾರ ಬಳಿ ಕಪ್ಪುಹಣ ಇದೆ ಎಂಬುದನ್ನು ಸ್ಪಷ್ಟಪಡಿಸಬೇಕೆಂದು ಮಾಯಾವತಿಯವರು ಹೇಳಿದರು.

ಕಲಾಪಕ್ಕೆ ವಿಪಕ್ಷಗಳು ತೀವ್ರ ಗದ್ದಲವನ್ನುಂಟು ಮಾಡಿದ್ದ ಹಿನ್ನೆಲೆಯಲ್ಲಿ ರಾಜ್ಯಸಭಾ ಉಪಸಭಾಪತಿ ಪಿ.ಜೆ. ಕುರಿಯನ್ ಅವರು ಕಲಾಪವನ್ನು ನಾಳೆಗೆ ಮುಂದೂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com