ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ ನಂತರ ಭಾರತೀಯ ಸೇನೆ ಸಾಮರ್ಥ್ಯ ಏನು ಅಂತ ಪಾಕಿಸ್ತಾನಕ್ಕೆ ಅರ್ಥವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಹೇಳಿದ್ದಾರೆ.
ಇಂದು ಪಂಜಾಬ್ ನ ಭಟಿಂಡಾದಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಉದ್ಘಾಟಿಸಿ ಮಾತನಾಡಿದ ಪ್ರಧಾನಿ, ನಮ್ಮ ಸರ್ಜಿಕಲ್ ಸ್ಟ್ರೈಕ್ ಗಡಿಯಾದ್ಯಂತ ವ್ಯಾಪಕ ಹಾನಿ ಮಾಡಿದೆ. ಪಾಕಿಸ್ತಾನಕ್ಕೆ ಈಗ ಭಾರತೀಯ ಸೇನೆಯ ಸಾಮರ್ಥ್ಯ ಏನು ಅಂತ ಸಂಪೂರ್ಣ ಅರ್ಥವಾಗಿದೆ ಎಂದರು.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತ ಸೀಮಿತಿ ದಾಳಿ ನಡೆಸಿದ ನಂತರ ಪಾಕಿಸ್ತಾನ ಸರ್ಕಾರ ಯುದ್ಧೋತ್ಸಾಹ ಪ್ರಕಟಿಸಿರುವುದಕ್ಕೆ ಜನರು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಪ್ರಧಾನಿ ಪಾಕ್ ವಿರುದ್ಧ ವಾಗ್ದಾಳಿ ನಡೆಸಿದರು.
ಭಾರತ ವಿರುದ್ಧ ಸಮರ ಸಾರುವುದನ್ನು ಬಿಟ್ಟು ಭ್ರಷ್ಟಾಚಾರ, ಕಪ್ಪುಹಣದ ಹಾಗೂ ಬಡತನದ ವಿರುದ್ಧ ಸಮರ ಸಾರುವಂತೆ ಪಾಕಿಸ್ತಾನಿಗಳು ತಮ್ಮನ್ನಾಳುವ ನಾಯಕರನ್ನು ಪ್ರಶ್ನಿಸಬೇಕು ಎಂದರು.
ಇದೇ ವೇಳೆ ಸಿಂಧು ನದಿ ನೀರಿನ ಹಂಚಿಕೆ ಬಗ್ಗೆ ಮಾತನಾಡಿದ ಮೋದಿ ಅವರು, ಭಾರತದ ಹಕ್ಕಿನ ನೀರು ಪಾಕಿಸ್ತಾನಕ್ಕೆ ಹೋಗುವುದಿಲ್ಲ. ಪಂಜಾಬಿನ ರೈತರ ನೀರಿನ ಹಕ್ಕನ್ನು ಪಾಲಿಸಲಾಗುವುದು ಎಂದರು.