

ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಸೇನಾ ಪಡೆ ಗುಂಡಿಗೆ ಬಲಿಯಾದ ಭಯೋತ್ಪಾದಕ ಬುರ್ಹಾನ್ ವಾನಿಯನ್ನು ಪಾಕ್ ಪ್ರಧಾನಿ ನವಾಜ್ ಷರೀಫ್ ಹೊಗಳಿರುವುದೇ ಪಾಕಿಸ್ತಾನಕ್ಕೂ ಭಯೋತ್ಪಾದನೆಗೂ ಇರುವ ನಂಟನ್ನು ಸ್ಪಷ್ಟಪಡಿಸುತ್ತದೆ ಎಂದು ಭಾರತ ಹೇಳಿದೆ.
ಉಗ್ರ ಬುರ್ಹಾನ್ ವನಿಯನ್ನು ಹೊಗಳಿರುವ ನವಾಜ್ ಷರೀಫ್ ಉಗ್ರನನ್ನು ಕಾಶ್ಮೀರದ ಮಣ್ಣಿನ ಮಗ ಎಂದು ಪಾಕ್ ಸಂಸತ್ ನಲ್ಲಿ ಬಣ್ಣಿಸಿದ್ದಾರೆ. ಉಗ್ರನನ್ನು ಪಾಕ್ ಪ್ರಧಾನಿ ಹೊಗಳಿರುವುದು ಪಾಕಿಸ್ತಾನಕ್ಕೂ ಭಯೋತ್ಪಾದನೆಗೂ ಇರುವ ನಂಟಿಗೆ ಸಾಕ್ಷಿ ಎಂದು ಭಾರತ ಸರ್ಕಾರ ಹೇಳಿದೆ.
ಭಾರತ- ಪಾಕಿಸ್ತಾನದ ದ್ವಿಪಕ್ಷೀಯ ಸಂಬಂಧದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಪಾಕ್ ಸಂಸತ್ ನ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ್ದ ಪಾಕ್ ಪ್ರಧಾನಿ, ಜಮ್ಮು-ಕಾಶ್ಮೀರದಲ್ಲಿ ಸೇನೆ ಗುಂಡಿಗೆ ಬಲಿಯಾದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಉಗ್ರ ಬುರ್ಹಾನ್ ವನಿಯನ್ನು ಹೊಗಳಿದ್ದರು. ಈ ಬೆನ್ನಲ್ಲೇ ಭಾರತ ಪಾಕ್ ಪ್ರಧಾನಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದು, ಪಾಕಿಸ್ತಾನಕ್ಕೂ ಭಯೋತ್ಪಾದನೆಗೂ ಇರುವ ನಂಟನ್ನು ಪಾಕ್ ಪ್ರಧಾನಿಯ ಹೇಳಿಕೆಯೇ ಸ್ಪಷ್ಟಪಡಿಸುತ್ತದೆ ಎಂದು ಹೇಳಿದೆ. ಕಾಶ್ಮೀರದ ಸ್ವಾಯತ್ತತೆಗೆ ಪ್ರಾರಂಭವಾಗಿರುವ ಚಳುವಳಿಯನ್ನು ಕಾಶ್ಮೀರಿ ಯುವಕರೇ ಕೈಗೆತ್ತಿಕೊಂಡಿದ್ದಾರೆ. ಕಾಶ್ಮೀರ ನೆಲದ ಮಗನಾಗಿರುವ ಬುರ್ಹಾನ್ ವನಿಯ ಸಾವು ಕಾಶ್ಮೀರಿ ಜನರಿಗೆ ಅವರ ಸ್ವಂತ ನಿರ್ಧಾರವನ್ನು ಕೈಗೊಳ್ಳುವ ಸ್ವಾತಂತ್ರ್ಯವನ್ನು ನೀಡಬೇಕೆಂಬುದನ್ನು ಭಾರತಕ್ಕೆ ನೆನಪಿಸಿದೆ ಎಂದು ಪಾಕ್ ಪ್ರಧಾನಿ ಹೇಳಿದ್ದರು.