

ನಾಗ್ಪುರ: ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಸೇರಿದಂತೆ ಇಡೀ ಕಾಶ್ಮೀರ ಭಾರತ ದೇಶದ ಅವಿಭಾಜ್ಯ ಅಂಗವಾಗಿದ್ದು, ಶೀಘ್ರದಲ್ಲಿಯೇ ಪಿಒಕೆ ಭಾರತಕ್ಕೆ ಮರು ಸೇರ್ಪಡೆಯಾಗಲಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಆರ್ ಎಸ್ ಎಸ್ ಸಂಸ್ಥಾಪನಾ ದಿನಾಚರಣೆ ಹಾಗೂ ದಸರಾ ಪ್ರಯುಕ್ತ ಮಹಾರಾಷ್ಟ್ರದ ನಾಗ್ಪುರದಲ್ಲಿ ಆಯೋಜಿಸಲಾಗಿರುವ ಬೃಹತ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮೋಹನ್ ಭಾಗವತ್ ಅವರು, ಕೆಲ ವ್ಯಕ್ತಿಗಳಿಗೆ ಹಾಗೂ ಕೆಲ ದೇಶಗಳಿಗೆ ಭಾರತದ ಅಭಿವೃದ್ಧಿಯನ್ನು ಕಂಡರಾಗುತ್ತಿಲ್ಲ. ದೇಶದ ಪ್ರಜೆಗಳಿಗೆ ಇದೀಗ ತಮ್ಮ ಸರ್ಕಾರ ನಿಜವಾಗಿಯೂ ಕೆಲಸ ಮಾಡುತ್ತಿದೆ ಎಂಬ ಭಾವನೆ ಮೂಡಲಾರಂಭಿಸಿದೆ. ಆದರೆ ಇದೇ ವಿಚಾರ ಕೆಲವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೇ ಕಾರಣಕ್ಕೆ ಸರ್ಕಾರದ ವಿರುದ್ಧ ಇಲ್ಲ-ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಕಾಂಗ್ರೆಸ್ ಹಾಗೂ ಅರವಿಂದ್ ಕೇಜ್ರಿವಾಲ್ ವಿರುದ್ದ ಪರೋಕ್ಷ ವಾಗ್ದಾಳಿ ನಡೆಸಿದ ಮೋಹನ್ ಭಾಗವತ್ ಅವರು, ಕೆವಲರು ಸೇನೆಯನ್ನು ಗುರಿಯಾಗಿಸಿಕೊಂಡು ಟೀಕೆಗಳನ್ನು ಮಾಡುವ ಮೂಲಕ ಭಾರತೀಯ ಸೈನಿಕರ ಧೃತಿಗೆಡಿಸುವ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಭಾರತೀಯ ಸೇನೆ ವಿಶ್ವದ ಬಲಿಷ್ಠ ಸೇನೆಯಾಗುವುದು ಇಷ್ಟವಿದ್ದಂತೆ ಕಾಣುತ್ತಿಲ್ಲ. ಹೀಗಾಗಿ ಭಾರತೀಯ ಸೇನಾ ಕಾರ್ಯಾಚರಣೆಗಳ ಕುರಿತು ಸಾಕ್ಷ್ಯಾಧಾರಗಳನ್ನು ಕೇಳುತ್ತಿದ್ದಾರೆ ಎಂದು ಖಾರವಾಗಿ ಹೇಳಿದರು.
ಕಾಶ್ಮೀರದಲ್ಲಿ ರಾಷ್ಟ್ರೀಯತೆಯನ್ನು ಪ್ರಚುರ ಪಡಿಸಬೇಕಿದೆ
ಇದೇ ವೇಳೆ ಕಾಶ್ಮೀರ ವಿಚಾರದ ಕುರಿತಂತೆ ಮಾತನಾಡಿದ ಭಾಗವತ್ ಅವರು, ಗಲಭೆ ಪೀಡಿತ ಕಾಶ್ಮೀರ ಇದೀಗ ಶಾಂತವಾಗಿದೆ. ಇದೇ ಹೊತ್ತಿನಲ್ಲೇ ಕಾಶ್ಮೀರದಲ್ಲಿ ರಾಷ್ಟ್ರೀಯತೆಯನ್ನು ಪ್ರಚಾರ ಮಾಡಬೇಕಿದೆ. ಅಲ್ಲಿನ ಯುವಕರಲ್ಲಿ ದೇಶಭಕ್ತಿ ಬೆಳೆಸುವ ಅವಶ್ಯಕತೆ ಇದ್ದು, ಆ ಮೂಲಕ ಕಾಶ್ಮೀರ ಹಿಂಸಾಚಾರವನ್ನು ತಡೆಯಬೇಕಿದೆ. ಅಂತೆಯೇ ಕಾಶ್ಮೀರವನ್ನು ಭಾರತದಿಂದ ವಿಭಜಿಸಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಹವಣಿಸುತ್ತಿರುವ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕಿದೆ ಎಂದು ಹೇಳಿದರು.
ಶೀಘ್ರದಲ್ಲೇ ಪಾಕ್ ಆಕ್ರಮಿತ ಕಾಶ್ಮೀರ ಭಾರತಕ್ಕೆ ಸೇರಿಕೊಳ್ಳಲಿದೆ
ಪಾಕಿಸ್ತಾನ ಆಕ್ರಮಿತ ಕಾಶ್ಮೀರವೂ ಸೇರಿದಂತೆ ಇಡೀ ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದು, ಯಾವುದೇ ಕಾರಣಕ್ಕೂ ಕಾಶ್ಮೀರವನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಪಾಕ್ ಆಕ್ರಮಿತ ಕಾಶ್ಮೀರ ಶೀಘ್ರದಲ್ಲೇ ಭಾರತಕ್ಕೆ ಮರು ಸೇರ್ಪಡೆಗೊಳ್ಳಲಿದೆ ಎಂದು ಭಾಗವತ್ ಹೇಳಿದರು.
ಗೋರಕ್ಷಕ ದಳಕ್ಕೆ ಭಾಗವತ್ ಬೆಂಬಲ
ಇದೇ ವೇಳೆ ಗೋರಕ್ಷಕ ದಳದ ಬೆಂಬಲಕ್ಕೆ ನಿಂತ ಮೋಹನ್ ಭಾಗವತ್ ಅವರು, ದೇಶಾದ್ಯಂತ ಗೋವು ರಕ್ಷಕ ಕಾನೂನು ಜಾರಿಯಾಗಿದ್ದು, ಇದರ ಸಕ್ರಮ ಪರಿಪಾಲನೆಗಾಗಿ ಗೋರಕ್ಷಕ ದಳಗಳ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಆಂದೋಲನದ ಮೂಲಕ ಗೋವುಗಳನ್ನು ರಕ್ಷಣೆ ಮಾಡುತ್ತಿದ್ದಾರೆ. ದೇಶವನ್ನು ವಿಭಿಜಸಲು ಯತ್ನಿಸುತ್ತಿರುವವರೊಂದಿಗೆ ಗೋವುರಕ್ಷಕರನ್ನು ಹೋಲಿಕೆ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.