ನವದೆಹಲಿ: ಶಿಕ್ಷಣವನ್ನು ಮಕ್ಕಳಿಗೆ ಹಂಚಲು ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಶಿಕ್ಷಣ ಮಕ್ಕಳ ಜೀವನದಲ್ಲಿ ತ್ಯಾಗ, ಸಹನೆ, ಬಹುಸಂಸ್ಕೃತಿ, ತಿಳುವಳಿಕೆ, ಸಹಾನುಭೂತಿ ನಾಗರಿಕ ಮೌಲ್ಯವನ್ನು ತುಂಬಬೇಕು ಎಂದು ಹೇಳಿದ್ದಾರೆ.
ಶಿಕ್ಷಕರ ದಿನಾಚರಣೆ ಪ್ರಯುಕ್ತ ಶುಭಾಶಯ ಕೋರಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮೂಲತಃ ಶಿಕ್ಷಕರು. ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಶಿಕ್ಷಕರ ತ್ಯಾಗ, ಸೇವೆಗಳನ್ನು ಗುರುತಿಸುವುದು ನಮ್ಮ ಹೊಣೆಯಾಗಿದೆ ಎಂದರು.
ಟ್ವಿಟ್ಟರ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ಅವರು, ಪ್ರಬುದ್ಧ ಸಮಾಜದ ತಳಹದಿಗೆ ಗಟ್ಟಿಯಾದ ಶಿಕ್ಷಣ ವ್ಯವಸ್ಥೆ ಅತ್ಯಂತ ಅಗತ್ಯವಾಗಿದೆ. ಉತ್ತಮ ಶಿಕ್ಷಣ ವ್ಯವಸ್ಥೆಯಲ್ಲಿ ಸ್ಪೂರ್ತಿ ತುಂಬುವ ಶಿಕ್ಷಕರು ಕಟ್ಟಡದ ಕಲ್ಲುಗಳಂತೆ. ಒಬ್ಬ ಸ್ಪೂರ್ತಿದಾಯಕ ಶಿಕ್ಷಕ ವಿದ್ಯಾರ್ಥಿಯ ವೈಯಕ್ತಿಕ ಗುರಿಗಳನ್ನು ಸಮಾಜದ ಮತ್ತು ದೇಶದ ಗುರಿಗಳನ್ನಾಗಿ ಬದಲಾಯಿಸುತ್ತಾನೆ ಎಂದು ಹೇಳಿದ್ದಾರೆ.
ಬೋಧನೆ ಮತ್ತು ಕಲಿಕೆಯಲ್ಲಿ ಪರಿಣಾಮಕಾರಿ ವಿಧಾನಗಳು ಮತ್ತು ಆಧುನಿಕತೆ ಸೃಷ್ಟಿಸಲು ಹೊಸ ಮಾದರಿ ಮತ್ತು ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು, ದೇಶದ ಭವಿಷ್ಯ ನಿರ್ಮಾತೃಗಳನ್ನು ರೂಪಿಸುವಲ್ಲಿ ಶಿಕ್ಷಕರ ಬದ್ಧತೆ ಮತ್ತು ತ್ಯಾಗವನ್ನು ಕೊಂಡಾಡಿದರು.
ನಮ್ಮ ದೇಶದ ಎರಡನೇ ರಾಷ್ಟ್ರಪತಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆಯನ್ನು ಶಿಕ್ಷಕರ ದಿನಾಚರಣೆ ಎಂದು ಆಚರಿಸಿಕೊಂಡು ಬರಲಾಗುತ್ತಿದೆ. ರಾಧಾಕೃಷ್ಣನ್ ಅವರು ಶಿಕ್ಷಣ ತಜ್ಞ, ತತ್ವಜ್ಞಾನಿ ಮತ್ತು ದೇಶದ ಅತ್ಯುನ್ನತ ನಾಗರಿಕ ಗೌರವವವಾದ ಭಾರತ ರತ್ನ ಸ್ವೀಕರಿಸಿದ್ದರು.