

ನವದೆಹಲಿ: ಉರಿ ಸೆಕ್ಟರ್ ಮೇಲಿನ ಉಗ್ರರ ದಾಳಿಗೆ ತೀವ್ರ ಖಂಡನೆ ವ್ಯಕ್ತಪಡಿಸಿರುವ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರು ಪಾಕಿಸ್ತಾನದ ಮೇಲೆ ಅಂತರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೇರಬೇಕಿದೆ ಎಂದು ಸೋಮವಾರ ಹೇಳಿದ್ದಾರೆ.
ದಾಳಿ ಕುರಿತಂತೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಸೇನಾ ಪ್ರಧಾನ ಕಚೇರಿ ಮೇಲೆ ನಡೆಸಲಾದ ದಾಳಿಯನ್ನು ಖಂಡಿಸಿದ್ದಾರೆ. ಅಲ್ಲದೆ, ಗಡಿ ಪ್ರದೇಶದಲ್ಲಿರುವ ತನ್ನ ಸೇನಾ ಕಚೇರಿಯನ್ನು ರಕ್ಷಿಸುವಲ್ಲಿ ಯೋಧರು ವಿಫಲರಾಗಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಮಸೂದ್ ಅಜರ್ ನನ್ನು ಬಿಡುಗಡೆ ಮಾಡುವಂತೆ ಭಾರತದ ಮೇಲೆ ಒತ್ತಡ ಹೇರಲು ಉಗ್ರರು 1999ರಲ್ಲಿ ಭಾರತೀಯ ವಿಮಾನವೊಂದನ್ನು ಹೈಜಾಕ್ ಮಾಡಿದ್ದರು. ಉಗ್ರರ ಒತ್ತಡಕ್ಕೆ ಮಣಿದಿದ್ದ ಅಂದಿನ ಅಡಳಿತಾರೂಢ ಎನ್ ಡಿಎ ಸರ್ಕಾರ ರಾಷ್ಟ್ರೀಯ ಭದ್ರತೆಯೊಂದಿಗೆ ರಾಜಿಯಾಗಿ ಮಸೂದ್ ಅಜರ್ ನನ್ನು ಬಿಡುಗಡೆ ಮಾಡಿತ್ತು.
ಉರಿ ಸೆಕ್ಟರ್ ದಾಳಿಯನ್ನು ಸಹಿಸಲು ಸಾಧ್ಯವಿಲ್ಲ. ಪಾಕಿಸ್ತಾನದ ಮೇಲೆ ಅಂತರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೇರುವ ಅಗತ್ಯವಿದೆ. ಭಾರತೀಯರ ರಕ್ಷಣೆಗಾಗಿ ನಾವು ಅಂದು ಭದ್ರತೆಯೊಂದಿಗೆ ರಾಜಿಯಾಗಿದ್ದೇವೆ. ಆದರೆ, ಈ ಬಾರಿ ಅದು ಸಾಧ್ಯವಿಲ್ಲ. ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕಿದೆ. ಸೇನಾ ಪ್ರಧಾನ ಕಚೇರಿ ದಾಳಿ ಹಿಂದೆ ಮಸೂದ್ ಅಜರ್ ನ ಕೈವಾಡಿವಿದೆ. ಪಾಕಿಸ್ತಾನದ ಕುಮ್ಮಕ್ಕು ಕೂಡ ಇದರ ಜೊತೆಗಿದೆ. ಗಡಿ ಪ್ರದೇಶದಲ್ಲಿ ಯೋಧರು ತಮ್ಮ ಪ್ರಧಾನ ಕಚೇರಿಯನ್ನು ರಕ್ಷಣೆ ಮಾಡಿಕೊಳ್ಳದಿರುವ ಬಗ್ಗೆಯೂ ಭಾರತ ಗಮನ ಹರಿಸಬೇಕಿದೆ ಎಂದು ಹೇಳಿದ್ದಾರೆ.
1999ರ ಡಿಸೆಂಬರ್ 24ರಂದು ನೇಪಾಳದಿಂದ ದೆಹಲಿಗೆ ಬರುತ್ತಿದ್ದ ಭಾರತೀಯ ವಿಮಾನ ಐಸಿ 814 ವಿಮಾನವನ್ನು ಉಗ್ರರ ತಂಡವೊಂದು ಹೈಜಾಕ್ ಮಾಡಿತ್ತು. ವಿಮಾನದಲ್ಲಿ 176 ಪ್ರಯಾಣಿಕರಿದ್ದರು. ವಿಮಾನವನ್ನು ಹೈಜಾಕ್ ಮಾಡಿದ್ದ ಉಗ್ರರು ಮಸೂದ್ ಅಜರ್ ನನ್ನು ಬಿಡುಗಡೆ ಮಾಡುವಂತೆ ಭಾರತದ ಮೇಲೆ ಒತ್ತಡ ವನ್ನು ಹೇರಿತ್ತು. ಈ ಒತ್ತಡಕ್ಕೆ ಮಣಿದಿದ್ದ ಅಂದಿನ ಸರ್ಕಾರ ಮೂವರು ಉಗ್ರರೊಂದಿಗೆ ಮಸೂದ್ ಅಜರ್ ನನ್ನು ಬಿಡುಗಡೆ ಮಾಡಿತ್ತು.