

ಹೈದರಾಬಾದ್: ಕಾವೇರಿ ವಿವಾದ ಕುರಿತಂತೆ ಎರಡು ರಾಜ್ಯಗಳ ನಡುವೆ ಉಂಟಾಗಿರುವ ವೈಮನಸ್ಸು ಆರೋಗ್ಯ ಪ್ರಜಾಪ್ರಭುತ್ವಕ್ಕೆ ಉತ್ತಮ ಚಿಹ್ನೆಯಲ್ಲ ಎಂದು ಕೇಂದ್ರ ಸಚಿವ ಎಂ. ವೆಂಕಯ್ಯ ನಾಯ್ಡು ಅವರು ಸೋಮವಾರ ಹೇಳಿದ್ದಾರೆ.
ತೆಲಂಗಾಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ನಂತರ ಕಾವೇರಿ ವಿವಾದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ನಾವು 69ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದ್ದೇವೆ. ಈ ಸಂದರ್ಭದಲ್ಲೂ ಈ ರಾಜ್ಯದ ಬಸ್ ಗಳು, ಆ ರಾಜ್ಯದ ಬಸ್ ಗಳೆಂದು ಬೆಂಕಿ ಹಚ್ಚಲಾಗುತ್ತಿದೆ. ಕಾವೇರಿ ವಿವಾದ ಕುರಿತಂತೆ ತಮಿಳುನಾಡು ಹಾಗೂ ಕರ್ನಾಟಕದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಉತ್ತಮವಾದ ಚಿಹ್ನೆಯಲ್ಲ ಎಂದು ಹೇಳಿದ್ದಾರೆ.
ನಾವೆಲ್ಲರೂ ಒಂದು. ಎಲ್ಲರೂ ಒಂದು ರಾಷ್ಟ್ರದಲ್ಲಿದ್ದೇವೆ. ನಾವೆಲ್ಲರೂ ಭಾರತೀಯರು. ನೆಲೆಯೂರಿರುವ ರಾಜ್ಯಗಳು ಬೇರೆಯಾದರೂ ಆಡಳಿತ ಹಾಗೂ ಅಭಿವೃದ್ಧಿ ಉದ್ದೇಶಗಳು ಒಂದೇ ಆಗಿದೆ. ಈ ಭಾವನೆ ಎಲ್ಲರಲ್ಲೂ ಇರಬೇಕು. ಇದನ್ನೇ ತಲೆಯಲ್ಲಿಟ್ಟುಕೊಂಡು ಎರಡೂ ರಾಜ್ಯದ ಜನರು ಕೈಜೋಡಿಸೋಣ. ಅಭಿವೃದ್ಧಿಗಾಗಿ ಕೆಲಸ ಮಾಡೋಣ ಎಂದು ತಿಳಿಸಿದ್ದಾರೆ.