ಸೀಮಿತ ದಾಳಿ: ಅರವಳಿಕೆ ನೀಡಿದ ರೋಗಿಯ ಸ್ಥಿತಿಯಂತಾಗಿದೆ ಪಾಕ್- ಪರಿಕ್ಕರ್

ಸೀಮಿತ ದಾಳಿ ನಂತರ ಪಾಕಿಸ್ತಾನದ ಸ್ಥಿತಿ ಅರವಳಿಕೆ ನೀಡಿದ ರೋಗಿ ಸ್ಥಿತಿಯಂತಾಗಿದ್ದು, ದಾಳಿ ನಡೆದು 2 ದಿನವಾದರೂ ಏನಾಗಿದೆ ಎಂಬುದರ ಅರಿವು ಇನ್ನೂ ಪಾಕಿಸ್ತಾನಕ್ಕೆ ಆಗಿಲ್ಲ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್...
ರಕ್ಷಣಾ ಸಚಿವ ಮನೋಹರ್ ಪರಿಕ್ಕರ್
ರಕ್ಷಣಾ ಸಚಿವ ಮನೋಹರ್ ಪರಿಕ್ಕರ್

ಡೆಹ್ರಾಡೂನ್: ಸೀಮಿತ ದಾಳಿ ನಂತರ ಪಾಕಿಸ್ತಾನದ ಸ್ಥಿತಿ ಅರವಳಿಕೆ ನೀಡಿದ ರೋಗಿ ಸ್ಥಿತಿಯಂತಾಗಿದ್ದು, ದಾಳಿ ನಡೆದು 2 ದಿನವಾದರೂ ಏನಾಗಿದೆ ಎಂಬುದರ ಅರಿವು ಇನ್ನೂ ಪಾಕಿಸ್ತಾನಕ್ಕೆ ಆಗಿಲ್ಲ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಹೇಳಿದ್ದಾರೆ.

ಉಗ್ರರ ವಿರುದ್ಧ ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿ ಕುರಿತಂತೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಅವರು, ಸೇನೆ ನಡೆಸಿದ ಸೀಮಿತಿ ದಾಳಿ ನಂತರ ಪಾಕಿಸ್ತಾನದ ಸ್ಥಿತಿ ಅವರಳಿಕೆ ನೀಡಿದ ರೋಗಿಯ ಪರಿಸ್ಥಿತಿಯಂತಾಗಿದೆ. ದಾಳಿ ನಡೆದು 2 ದಿನಗಳು ಕಳೆದರೂ ಏನಾಗಿದೆ ಎಂಬುದರ ಅರಿವು ಇನ್ನೂ ಪಾಕಿಸ್ತಾನಕ್ಕೆ ಆಗಿಲ್ಲ ಎಂದಿದ್ದಾರೆ.  

ಭಾರತ ಶಾಂತಿಯನ್ನು ಪ್ರೀತಿಸುವ ದೇಶವಾಗಿದ್ದು, ಅತಿಕ್ರಮಣ ದಾಳಿ, ಭಯೋತ್ಪಾದನಾ ಚಟುವಟಿಕೆಗಳನ್ನು ಸಹಿಸುವುದಿಲ್ಲ. ಯಾವುದೇ ದೇಶವನ್ನು ವಶಕ್ಕೆ ಪಡೆಯಬೇಕೆಂಬ ಉದ್ದೇಶ ಭಾರತಕ್ಕಿಲ್ಲ. ದೇವದೂತ ರಾಮ ಲಂಕೆಯನ್ನು ಗೆದಿದ್ದ. ಆದರೆ, ನಂತರ ಅದನ್ನು ವಿಭಿಷಣನಿಗೆ ನೀಡಿದ್ದ. ಬಾಂಗ್ಲಾದೇಶದಲ್ಲೂ ನಾವು ಅದನ್ನೇ ಮಾಡಿದ್ದೆವು. ಇತರರಿಗೆ ನೋವುಂಟು ಮಾಡುವುದು ನಮಗಿಷ್ಟವಿಲ್ಲ. ಆದರೆ, ನಮಗೆ ನೋವುಂಟು ಮಾಡಿದವರಿಗೆ ತಕ್ಕ ಉತ್ತರ ನೀಡುತ್ತೇವೆ.

ಸೀಮಿತ ದಾಳಿಯೊಂದು ಪಾಕಿಸ್ತಾನಕ್ಕೆ ನೀಡಿದ ಸಂದೇಶವಾಗಿದೆ. ಪ್ರತ್ಯುತ್ತರ ಹೇಗೆ ನೀಡಬೇಕೆಂಬುದು ಭಾರತೀಯ ಸೇನೆಗೆ ಗೊತ್ತಿದೆ. ಭಾರತೀಯ ಸೇನೆ ಹನುಮಂತನಿದ್ದಂತೆ. ದೈವದೂತ ಹನಮಂತನಿಗೆ ಲಂಕೆಗೆ ಹೋಗುವವರೆಗೂ ತನಗಿರುವ ಶಕ್ತಿಯ ಬಗ್ಗೆ ಅರಿವಿರಲಿಲ್ಲ. ಭಾರತೀಯ ಸೇನೆಗೂ ತನಗಿರುವ ಶಕ್ತಿಯ ಅರಿವಾಗುವಂತೆ ಮಾಡಿದ್ದೇವೆ. ತಾವು ಏನು ಮಾಡಬಹುದು ಹಾಗೂ ತಮಗೆಷ್ಟು ಶಕ್ತಿಯಿದೆ ಎಂಬುದರ ಸಣ್ಣ ಕಲ್ಪನೆಯನ್ನು ಸೀಮಿತ ದಾಳಿ ಮೂಲಕ ನಮ್ಮ ಸೇನೆಗೆ ನೀಡಿದ್ದೇವೆ ಎಂದಿದ್ದಾರೆ.

ಇದೇ ವೇಳೆ ಸೀಮಿತ ದಾಳಿಯನ್ನು ಪಾಕಿಸ್ತಾನ ತಿರಸ್ಕರಿಸುತ್ತಿರುವುದರ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಪಾಕಿಸ್ತಾನ ಈ ರೀತಿಯ ಪ್ರತಿಕ್ರಿಯೆ ನೀಡುವುದು ಸಹಜ. ಏಕೆಂದರೆ, ಭಾರತೀಯ ಸೇನೆ ಯಾವಾಗ ಹಾಗೂ ಹೇಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಬಂದಿತ್ತು, ಹೇಗೆ ತನ್ನ ಕೆಲಸವನ್ನು ಮಾಡಿ ಹೋಗಿದೆ ಎಂಬುದು ಈ ವರೆಗೂ ಪಾಕಿಸ್ತಾನದ ಗಮನಕ್ಕೇ ಬಂದಿಲ್ಲ. ಶಸ್ತ್ರಚಿಕಿತ್ಸೆ ನಡೆದ ವ್ಯಕ್ತಿ ಯಾವ ಸ್ಥಿತಿಯಲ್ಲಿರುತ್ತಾನೋ ಹಾಗೆಯೇ ಪಾಕಿಸ್ತಾನದ ಸ್ಥಿತಿ ಇದೆ. ಅರವಳಿಕೆ ನೀಡಿದ ರೋಗಿಯ ಸ್ಥಿತಿಯಂತಾಗಿದೆ ಪಾಕಿಸ್ತಾನದ ಪರಿಸ್ಥಿತಿ.

ದಾಳಿ ನಡೆದಿದೆ ಎಂಬ ವಿಚಾರ ತಿಳಿದಾಗ ಮೊದಲ ಬಾರಿಗೆ ಹೇಗೆ ಪ್ರತಿಕ್ರಿಯೆ ನೀಡಬೇಕೆಂಬುದು ಸ್ವತಃ ಪಾಕಿಸ್ತಾನಕ್ಕೇ ತಿಳಿದಿರಲಿಲ್ಲ. ಭಾರತೀಯ ಸೇನೆ ಏನು ಮಾಡಿದರು ಎಂಬುದು ಪಾಕಿಸ್ತಾನ ಸೇನೆಗಾಗಲೀ ಹಾಗೂ ಅಲ್ಲಿನ ಅಧಿಕಾರಿಗಳಿಗಾಗಲೀ ತಿಳಿದಿರಲಿಲ್ಲ. ಆದರೆ, ಏನು ಮಾಡಬೇಕಿತ್ತೋ ಅದನ್ನು ಭಾರತೀಯ ಸೇನೆ ಮಾಡಿ ಬಂದಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಸೀಮಿತ ದಾಳಿಯಲ್ಲಿ ಪ್ರಾಣದ ಹಂಗು ತೊರೆದು ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿದ ಭಾರತೀಯ ಸೇನೆಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com